ಅಸ್ಸಾಂನಲ್ಲಿ ಭಾರೀ ಮಳೆಗೆ 9 ಮಂದಿ ಬಲಿ, 6 ಲಕ್ಷಕ್ಕೂ ಹೆಚ್ಚು ಜನ ಅತಂತ್ರ
9 Die In Assam Floods,Over 6 Lakh Affected Across 27 Districts

ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ವರುಣನ ರೌದ್ರಾವತಾರಕ್ಕೆ 9 ಮಂದಿ ಬಲಿಯಾಗಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ವರುಣನ ಆರ್ಭಟದಿಂದ ಭೂ ಕುಸಿತ ಉಂಟಾಗಿ ಅನೇಕ ಕಡೆ ರಸ್ತೆ, ರೈಲು ಮಾರ್ಗಗಳಿಗೆ ತೀವ್ರ ತೊಂದರೆಯಾಗಿದೆ. ನಾಗೋನ್ ಜಿಲ್ಲೆಯಲ್ಲಿ 2.8 ಲಕ್ಷ ಮಂದಿ ಪ್ರವಾಹ ಹಾಗೂ ಮಳೆಯಿಂದ ಸಂತ್ರಸ್ತರಾಗಿದ್ದಾರೆ.ಉಳಿದ ಜಿಲ್ಲೆಗಳಲ್ಲಿ 135 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, 48 ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಆಶ್ರಯ ಪಡೆದಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ 113 ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರ 150 ಕೋಟಿ ರೂ. ಬಿಡುಗಡೆ ಮಾಡಿದೆ. ಜತೆಗೆ ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ರೂ. ಮಂಜೂರು ಮಾಡಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಾನ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅಸೋವಾ ಜಿಲ್ಲೆ ಹಾಗೂ ಬರಾಕ್ ವ್ಯಾಲಿ ನಡುವೆ ಮತ್ತು ಅಕ್ಕಪಕ್ಕದ ರಾಜ್ಯಗಳಾದ ತ್ರಿಪುರಾ, ಮಿಜೋರಾಂ, ಮಣಿಪುರಗಳಲ್ಲಿನ ರೈಲು ಹಾಗೂ ರಸ್ತೆ ಮಾರ್ಗಗಳಿಗೆ ಹಾನಿಯಾಗಿದ್ದು, ಸಂಪರ್ಕಕ್ಕೆ ಅಡಚಣೆಯಾಗಿದೆ. ಈ ಜಿಲ್ಲೆಯಲ್ಲಿ ಸಂತ್ರಸ್ತರಾಗಿರುವ ಜನರಿಗೆ ವಾಯುಪಡೆಯ ಹೆಲಿಕಾಪ್ಟರ್‍ಗಳ ಮೂಲಕ ಅಗತ್ಯ ವಸ್ತುಗಳನ್ನು ರವಾನಿಸಲಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ರಸ್ತೆ ಸಂಪರ್ಕ ಸರಿಯಾಗಲಿದ್ದು, ರೈಲು ಸಂಪರ್ಕ ಸರಿಪಡಿಸಲು ಸುಮಾರು 45 ದಿನಗಳು ಬೇಕಾಗಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಸ್ಸೋಂ ಅರಣ್ಯ ಇಲಾಖೆಯು ಕಾಂಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಇತರೆ ಅರಣ್ಯಗಳಲ್ಲಿ ಪ್ರವಾಹದ ವೇಳೆ ಪ್ರಾಣಿಗಳಿಗೆ ಆಶ್ರಯ ಕಲ್ಪಿಸಲು ಸುಮಾರು 40 ಎತ್ತರದ ಸ್ಥಳಗಳನ್ನು ನಿರ್ಮಿಸಿದೆ. ಅಸ್ಸೋಂಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ. ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.