ಅಮ್ಮನಾದ ನಟಿ ಪ್ರಣೀತಾ; ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ದೃಶ್ಯ ನೆನಪಿಸಿಕೊಂಡಿದ್ದೇಕೆ

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಮೊನ್ನೆಮೊನ್ನೆಯಷ್ಟೇ ತಾಯಿಯಾಗಿದ್ದಾರೆ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅವರು ಮಗುವೊಂದಿಗಿನ ಫೋಟೋ ಕೂಡ ಹಂಚಿಕೊಂಡಿದ್ದರು. ಇದೀಗ ಅವರು ತಮ್ಮ ತಾಯಿಯ ಜತೆಗಿನ ಫೋಟೋ ಹಂಚಿಕೊಂಡಿದ್ದಲ್ಲದೆ ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ದೃಶ್ಯವೊಂದನ್ನು ನೆನಪಿಸಿಕೊಂಡಿದ್ದಾರೆ.
ವಿಶೇಷವೆಂದರೆ ನಟಿ ಪ್ರಣೀತಾ ಅವರ ಹೆರಿಗೆ ಜವಾಬ್ದಾರಿಯನ್ನು ಗೈನಕಲಾಜಿಸ್ಟ್ ಆಗಿರುವ ಅವರ ತಾಯಿ ಡಾ. ಜಯಶ್ರೀ ಅವರೇ ವಹಿಸಿಕೊಂಡಿದ್ದರು. ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವ ಹಂಚಿಕೊಂಡಿರುವ ಪ್ರಣೀತಾ, ಆ ಕುರಿತು ಅಮ್ಮನಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಯಾವುದೇ ಹುಡುಗಿ ಕೇಳಬಹುದಾದ ಅತ್ಯುತ್ತಮ ಸಂಗತಿ ಎಂದರೆ ಗೈನಕಲಾಜಿಸ್ಟ್ ಆಗಿರುವ ತಾಯಿ. ಆದರೆ ಗೈನಕಲಾಜಿಸ್ಟ್ ತನ್ನ ಮಗಳಿಗೇ ಹೆರಿಗೆ ಮಾಡಿಸುವುದಿದೆಯಲ್ಲ ಅದು ಅತ್ಯಂತ ಸವಾಲಿನ ಸಂಗತಿ. ಭಾವನಾತ್ಮಕವಾಗಿ ಅದು ಅತಿ ಕಠಿಣವಾದ ವಿಷಯ. ಏಕೆಂದರೆ ಹೆರಿಗೆಯಲ್ಲಿನ ಸಂಕೀರ್ಣತೆಗಳ ಅರಿವು ಆಕೆಗೆ ತಿಳಿದಿರುತ್ತದೆ ಎಂದು ಪ್ರಣೀತಾ ಹೇಳಿಕೊಂಡಿದ್ದಾರೆ.
ಅಮ್ಮ ಹೆರಿಗೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ದೃಶ್ಯವೊಂದು ನೆನಪಾಗುತ್ತಿದೆ. ಅಲ್ಲಿ ಬೊಮನ್ ಇರಾನಿ ಅವರು ತನ್ನ ಮಗಳಿಗೆ ಆಪರೇಷನ್ ಮಾಡುವುದಿದ್ದರೆ ಕೈ ನಡುಗುತ್ತದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡ ಪ್ರಣೀತಾ, ಹೆರಿಗೆಯನ್ನು ಒಂದು ನೆಮ್ಮದಿಯುತ ಅನುಭವ ಆಗಿಸಿದ್ದಕ್ಕೆ ಥ್ಯಾಂಕ್ಸ್ ಅಮ್ಮ ಎಂದಿದ್ದಾರೆ.
ಅಮ್ಮ ಯಾಕೆ ಯಾವಾಗಲೂ ತನ್ನ ರೋಗಿಗಳನ್ನು ನೋಡಲು ಹೊತ್ತಲ್ಲದ ಹೊತ್ತಲ್ಲೂ ಆಸ್ಪತ್ರೆಗೆ ಧಾವಿಸುತ್ತಾರೆ ಎಂಬುದು ನನಗೆ ಈಗ ಅರ್ಥವಾಗಿದೆ. ಪ್ರತಿ ರೋಗಿಯ ಜವಾಬ್ದಾರಿ ಗೈನಕಲಾಜಿಸ್ಟ್ ಆಗಿ ಅವರ ಕೈಯಲ್ಲಿರುತ್ತದೆ. ಅದಕ್ಕೆ ಅವರು ತನ್ನ ವೈಯಕ್ತಿಕ ಬದುಕಿಗಿಂತ ವೃತ್ತಿ ಬದುಕಿಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂಬುದಾಗಿ ಹೆರಿಗೆ ಮಾಡಿಸಿದ ಅಮ್ಮನ ಕುರಿತು ಪ್ರಣೀತಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.