ಅಮೆರಿಕಾದ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ : 21 ಮಂದಿ ದುರ್ಮರಣ

ವಾಷಿಂಗ್ಟನ್: ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ ನಡೆದಿದೆ. ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಬಲಿ ಆಗಿರುವ ಘಟನೆ ನಡೆದಿದೆ.

ಈ ಬಗ್ಗೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೊಟ್ ಮಾಹಿತಿ ನೀಡಿದ್ದು, ಸುಮಾರು 18 ವರ್ಷ ವಯಸ್ಸಿನ ಸಾಲ್ವಡೆರ್ ರೊಮೊಸ್ (18) ಎಂಬಾತ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಘಟನೆಯಲ್ಲಿ ಒಟ್ಟಾರೆಯಾಗಿ 21 ಜನರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಭದ್ರತಾ ಸಿಬ್ಬಂದಿ ಪ್ರತಿದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಶ್ವೇತಭವನದಲ್ಲಿ ಶೂಟೌಟ್‍ನಲ್ಲಿ ಮಡಿದವರಿಗೆ ಶೋಕ ವ್ಯಕ್ತಪಡಿಸಲು ಧ್ವಜಗಳನ್ನು ಅರ್ಧ ಹಾರಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಘಟನೆಯನ್ನು ಖಂಡಿಸಿದ್ದಾರೆ. ಇದು ಈ ವರ್ಷದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2012ರಲ್ಲಿ ಕನೆಕ್ಟಿಕಟ್‍ನಲ್ಲಿ ನಡೆದ ಸ್ಯಾಂಡಿಹುಕ್ ಗುಂಡಿನ ದಾಳಿಯಲ್ಲಿ 20 ಮಕ್ಕಳು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿದರು. ಈ ಘಟನೆಯನ್ನು ನೆನಪಿಸುವಂತಿದೆ.