ರಾಜ್ಯ

ಅಮರನಾಥದಲ್ಲಿ ಮೇಘಸ್ಫೋಟ: 15 ಸಾವು, 62 ಮಂದಿ ನಾಪತ್ತೆ

ಕಾಶ್ಮೀರದಲ್ಲಿರುವ ಪವಿತ್ರ ಅಮರನಾಥ ಗುಹೆಯ ಬಳಿ ಮೇಘಸ್ಫೋಟಗೊಂಡಿದ್ದು ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಇದುವರೆಗೆ 62 ಮಂದಿ ನಾಪತ್ತೆಯಾಗಿದ್ದಾರೆ. ಅವಘಡ ಸಂಭವಿಸಿದ ಬಳಿಕ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಸಹಜವಾದ ನಂತರ ಮತ್ತೆ ಪ್ರಯಾಣ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಐಟಿಬಿಪಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಅಮರನಾಥ ಯಾತ್ರೆಗೆ ಆಗಮಿಸಿದ ಯಾತ್ರಾರ್ಥಿಗಳನ್ನು ಸರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಅವಘಡದಲ್ಲಿ ಗಾಯಗೊಂಡ ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ದಿನವಷ್ಟೇ ಅಮರನಾಥದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಯಭೀತರಾದ ಜನ ಅಡ್ಡಾದಿಡ್ಡಿ ಓಡಾಡಿ ಕಾಲ್ತುಳಿತ ಸಹ ಸಂಭವಿಸಿತ್ತು. ಇದಲ್ಲದೇ ಅಮರನಾಥದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್‌ಗಳನ್ನು ಸಹ ತರಿಸಲಾಗಿದೆ.

ಗಂಭೀರ ರೋಗಿಗಳನ್ನು ತಕ್ಷಣ ಸ್ಥಳಾಂತರಿಸಲು ಈ ಸಿದ್ಧತೆ ನಡೆಸಲಾಗಿದೆ. ಘಟನೆಯಲ್ಲಿ ಹಲವಾರು ಟೆಂಟ್‌ಗಳು ಮತ್ತು ಸಮುದಾಯ ಅಡುಗೆ ಕೋಣೆಗಳು ನಾಶವಾಗಿವೆ ಎಂದು ಪೊಲೀಸರು ಮತ್ತು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಪ್ರಯಾಣ ಸ್ಥಗಿತ: ಈ ದುರಂತದಿಂದಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಮತ್ತೆ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 3 ರಂದು ಅಮರನಾಥ ಯಾತ್ರೆ ಆರಂಭವಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಭಾರೀ ಮಳೆಯ ನಡುವೆ ಸಂಜೆ 5.30 ಕ್ಕೆ ಮೇಘಸ್ಪೋಟಗೊಂಡಿದೆ.

ದಟ್ಟವಾದ ನೀರು ಮತ್ತು ಕೆಸರು ಪರ್ವತದ ಇಳಿಜಾರುಗಳಿಂದ ಕಣಿವೆಯ ಕಡೆಗೆ ಹರಿಯಲು ಪ್ರಾರಂಭಿಸಿದ್ದವು. ಗುಹೆಯ ಸ್ವಯಂಚಾಲಿತ ಹವಾಮಾನ ಕೇಂದ್ರದ ಪ್ರಕಾರ, ಸಂಜೆ 4.30 ರಿಂದ 6.30ರವರೆಗೆ 31 ಮಿಮೀ ಮಳೆಯಾಗಿದೆ.

ಗಣ್ಯರಿಂದ ಸಂತಾಪ: ಘಟನೆಯ ಬಳಿಕ ಸಂತಾಪ ಸೂಚಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಅಮರನಾಥ ಗುಹೆ ಬಳಿ ಸಂಭವಿಸಿದ ಮೇಘಸ್ಫೋಟದಿಂದ ದುರಂತ ಸಂಭವಿಸಿದ್ದು, ಇದು ದುಃಖದ ಸಂಗತಿಯಾಗಿದೆ.

ಮೃತ ಕುಟುಂಬಗಳಿಗೆ ಸಂತಾಪ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸಹ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. “ಪವಿತ್ರ ಅಮರನಾಥ ಯಾತ್ರೆಯಲ್ಲಿದ್ದ ಯಾತ್ರಿಕರು ಮೇಘಸ್ಪೋಟದಿಂದಾಗಿ ಸಾವನ್ನಪ್ಪಿದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ.

ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ, ಮೃತರ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button