ಅಬಕಾರಿ ಅವ್ಯವಹಾರ ಇಡಿ ದಾಳಿ

ಇತ್ತೀಚೆಗಷ್ಟೆ ವಾಪಸ್ ಪಡೆದಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಮೂರು ರಾಜ್ಯಗಳ ೩೫ ಕಡೆಗಳಲ್ಲಿ ಹಠಾತ್ ದಾಳಿ ನಡೆಸಿದ್ದಾರೆ.
ರಾಜಧಾನಿ ದೆಹಲಿ, ಪಂಜಾಬ್ ಹಾಗೂ ಹೈದರಾಬಾದ್ ಸೇರಿದಂತೆ ೩೫ ಕಡೆಗಳಲ್ಲಿ ದಾಳಿ ಮಾಡಿ ಇಡಿ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದ್ದಾರೆ.ಅಬಕಾರಿ ವಿತರಕರು ಹಾಗೂ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಅಬಕಾರಿ ನೀತಿಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಇದುವರೆಗೂ ೧೦೩ಕ್ಕೂ ಹೆಚ್ಚು ದಾಳಿ ನಡೆಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ವ್ಯಾಪಾರಿ ಮತ್ತು ಇಂಡೋಸ್ಪಿರಿಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್‌ಮಹಾಂದ್ರು ಅವರನ್ನು ಈಗಾಗಲೇ ಬಂಧಿಸಲಾಗಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಸಿಬಿಐ ಎಫ್‌ಐಆರ್ ದಾಖಲಿಸಿದೆ.
೨೦೨೧-೨೨ರ ದೆಹಲಿ ಸರ್ಕಾರದ ಅಬಕಾರಿ ನೀತಿ ಅನುಷ್ಠಾನಕ್ಕೆ ತಂದಿತ್ತು. ಈ ಅಬಕಾರಿ ನೀತಿಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗೌರ್‍ನರ್ ಸಿಬಿಐ ತನಿಖೆಗೆ ಒಪ್ಪಿಸಿ ೧೧ ಮಂದಿ ಅಬಕಾರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದರು.
ಅಬಕಾರಿ ನೀತಿಯಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್‌ಸಿಸೋಡಿಯಾ ಮನೆ ಹಾಗೂ ಕಚೇರಿ ಮೇಲೆ ಹಿರಿಯ ಅಧಿಕಾರಿಗಳು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಈ ದಾಳಿ ಆಮ್‌ಆದ್ಮಿ ಪಕ್ಷ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು.