ರಾಷ್ಟ್ರಿಯ

‘ಅಪ್ರಾಪ್ತ’ ಮುಸ್ಲಿಂ ಬಾಲಕಿಯ ಮದುವೆಗೆ ಒಪ್ಪಿಗೆ ನೀಡಿದ ಪಂಜಾಬ್‌ ಹೈಕೋರ್ಟ್‌!

ಪಠಾಣ್‌ಕೋಟ್‌ (ಪಂಜಾಬ್‌): ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಬಾಲಕ ಬಾಲಕಿಯರು ವಿವಾಹವಾಗಬಹುದು ಎಂದು ಪಂಜಾಬ್‌ ಹಾಗೂ ಹರ್ಯಾಣ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಆ ಮೂಲಕ ಕಾನೂನಿನಲ್ಲಿ ಅಪ್ರಾಪ್ತ ಎಂದು ಪರಿಗಣಿಸಲಾಗುವ ವಯಸ್ಸಿನಲ್ಲೂ ಮುಸ್ಲಿಂ ಬಾಲಕ ಬಾಲಕಿಯರಿಗೆ ವಿವಾಹ ಆಗಬಹುದು ಎನ್ನುವ ಅಪರೂಪದ ತೀರ್ಪನ್ನು ಉಚ್ಛ ನ್ಯಾಯಾಲಯ ನೀಡಿದೆ.
16 ಹಾಗೂ 21ನೇ ವಯಸ್ಸಿನಲ್ಲಿ ವಿವಾಹವಾಗಿ, ತಮಗೆ ರಕ್ಷಣೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೊರೆ ಸಲ್ಲಿಸಿದ ಜೋಡಿಯೊಂದರ ಪ್ರಕರಣದ ತೀರ್ಪಿನಲ್ಲಿ ಕೋರ್ಟ್‌ ಈ ರೀತಿಯಾಗಿ ಹೇಳಿದೆ. ಆ ಮೂಲಕ ಅಪರೂಪದ ತೀರ್ಪೊಂದು ದೇಶದ ಉಚ್ಛ ನ್ಯಾಯಾಲಯದಿಂದ ಹೊರಬಿದ್ದಿದೆ.

ಜೋಡಿಯ ವಾದವೇನು?
ನಾವು ಮುಸ್ಲಿಂ ಧರ್ಮದ ವಿಧಿವಿಧಾನದಂತೆ ವಿವಾಹವಾಗಿದ್ದೇವೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅನ್ವಯ ಪ್ರೌಢಾವಸ್ಥೆ ತಲುಪಿದ್ದೇವೆ. 15 ವರ್ಷ ತಲುಪಿದವರನ್ನು ಇಸ್ಲಾಮಿಕ್‌ ಕಾನೂನಿನಲ್ಲಿ ಪ್ರೌಢಾವಸ್ಥೆ ತಲುಪಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಮಗೆ ರಕ್ಷಣೆ ಕೊಡಬೇಕು ಎಂದು ಹೈ ಕೋರ್ಟ್‌ ಮೊರೆ ಹೋಗಿದ್ದರು.


ಕೋರ್ಟ್‌ ಹೇಳಿದ್ದೇನು?
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ‘ಈ ವಿಚಾರದಲ್ಲಿ ಕೋರ್ಟ್‌ ಕಣ್ಣು ಮುಚ್ಚಿ ಕುಳಿತುಕೊಳ್ಳಲಾಗುವುದಿಲ್ಲ. ಅರ್ಜಿದಾರರು ಪೋಷಕರ ವಿರುದ್ಧ ವಿವಾಹವಾಗಿದ್ದಾರೆ ಎನ್ನುವ ಕಾರಣಕ್ಕೆ ಸಂವಿಧಾನ ನೀಡಿರುವ ಅರ್ಜಿದಾರರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ಜಸ್ಜಿತ್‌ ಸಿಂಗ್‌ ಬೇಡಿ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

ಮೊದಲನೇ ಅರ್ಜಿದಾರರು 21 ವಯಸ್ಸು ಪೂರೈಸಿದ್ದು, ಎರಡನೇ ಅರ್ಜಿದಾದರಿಗೆ 16 ವಯಸ್ಸು ಪ್ರಾಯ ತುಂಬಿದೆ. ಮೊಹಮ್ಮದನ್‌ ಲಾ ಪ್ರಕಾರ ಪ್ರೌಢಾವಸ್ಥೆ ತಲುಪಿದವರು ವಿವಾಹವಾಗಲು ಅರ್ಹರು. ಮುಸ್ಲಿಂ ವೈಯಕ್ತಿಕ ಕಾನೂನಿನ ಈ ನಿಯಮದ ಪ್ರಕಾರ ಇಬ್ಬರೂ ಅರ್ಜಿದಾರರು ವಿವಾಹವಾಗಲು ಯೋಗ್ಯ ವಯಸ್ಸಿನವರಾಗಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಅಪ್ರಾಪ್ತರ ಈ ವಿವಾಹ ಸಿಂಧುವೇ?
ಇನ್ನು ವಿವಾಹವಾಗಲು ಯೋಗ್ಯರಿದ್ದಾರೆ ಎಂದು ತೀರ್ಪಿತ್ತಿರುವ ನ್ಯಾಯಪೀಠ, ಈ ತೀರ್ಪಿಗೂ ಈ ಮದುವೆಯ ಸಿಂಧುತ್ವಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದೆ.
ಈ ವಿವಾಹದಿಂದಾಗಿ ಅರ್ಜಿದಾರ ಜೀವಕ್ಕೆ ಅಪಾಯ ಇರುವುದರಿಂದ ಭಾರತೀಯ ಸಂವಿಧಾನದ 21ನೇ ಪರಿಚ್ಛೇದದಡಿ ರಕ್ಷಣೆ ನೀಡಬೇಕು ಎಂದು ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿದೆ.
ಈ ಬಗ್ಗೆ ಪಠಾಣ್‌ಕೋಟ್‌ನ ಪೊಲೀಸ್ ಅಧೀಕ್ಷರಿಗೆ ಕೋರ್ಟ್‌ ಸೂಚನೆ ನೀಡಿದ್ದು, ಕಾನೂನು ಪ್ರಕಾರ ಎಲ್ಲಾ ಭದ್ರತೆಗಳನ್ನು ನೀಡಬೇಕು ಎಂದು ಆದೇಶ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button