
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತದೆ. ಇದರಿಂದಾಗಿ ನದಿಪಾತ್ರದ ಹಲವು ದೇಗುಲಗಳು ಜಲಾವೃತಗೊಂಡಿವೆ.ಜಲಾಶಯ ಸಾಮರ್ಥ್ಯ ೧೨೪.೮ ಅಡಿ ಇದೆ.
ಈಗ ಅಣೆಕಟ್ಟೆಯಲ್ಲಿ ೧೨೩.೪೦ ಅಡಿ ನೀರಿದೆ. ೭೨.೬೪೬ ಕ್ಯೂಸೆಕ್ ನೀರಿನ ಒಳಹರಿವಿದೆ. ಅಣೆಕಟ್ಟೆಯಿಂದ ೮೦,೩೨೦ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.೪೯.೪೫೨ ಟಿಎಂಸಿ ಸಾಂದ್ರತೆ ಇರುವ ಜಲಾಶಯದಲ್ಲಿ ಪ್ರಸ್ತುತ ೪೭.೫೧೬ ಟಿಎಂಸಿ ನೀರಿದೆ. ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಕಾವೇರಿ ನದಿ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಭಾರಿ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ವೇಣುಗೋಪಾಲಸ್ವಾಮಿ ದೇಗುಲದ ಗರ್ಭಗುಡಿಗೆ ನೀರು ನುಗ್ಗಿದೆ.ಶ್ರೀರಂಗಪಟ್ಟಣದ ಸೇತುವೆ ಬಳಿ ಸಾಯಿ ಮಂದಿರ ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿದೆ.
ಗಂಜಾಂ ಬಳಿಯ ಪ್ರಸಿದ್ಧ ನಿಮಿಷಾಂಭ ದೇವಾಲಯದ ಬಾಗಿಲವರೆಗೂ ನೀರು ಹರಿದು ಬಂದಿದೆ.ಪ್ರವಾಸಿಗರು ನದಿಗೆ ಇಳಿಯದಂತೆ ಎಚ್ಚರವಹಿಸಲಾಗಿದೆ. ನಿಮಿಷಾಂಭ ದೇವಾಲಯವನ್ನು ಬಂದ್ ಮಾಡಿ, ಬ್ಯಾರಿಕೇಡ್ ಅಳವಡಿಸಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.