ಅಪಾಯದ ತೂಗುಯ್ಯಾಲೆ: ಮಳೆ, ಗಾಳಿಗೆ ತೂರಾಡುವ ನಿಟ್ಟೂರಿನ ಹೆಬ್ಬಿಗೆ ಸೇತುವೆ

ನಿಟ್ಟೂರು: ರಾಜ್ಯದ ಎರಡನೇ ಅತೀ ಉದ್ದದ ತೂಗು ಸೇತುವೆ ಹೆಗ್ಗಳಿಕೆಯ ಹೆಬ್ಬಿಗೆ ತೂಗು ಸೇತುವೆ ಹತ್ತು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಅಪಾಯದ ಅಂಚಿಗೆ ತಲುಪಿದ್ದು, ಗುಜರಾತ್ ತೂಗುಸೇತುವೆ ದುರಂತದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಸಿದೆ.ದಶಕಗಳ ಹೋರಾಟದ ಫಲವಾಗಿ 2011ರಲ್ಲಿ 1.25 ಕೋಟಿ ರೂ.
ವೆಚ್ಚದಲ್ಲಿ ಸರಕಾರವು ಮಲೆನಾಡು ಅಭಿವೃದ್ಧಿ ಮಂಡಳಿ ಮೂಲಕ ನಿಟ್ಟೂರಿನಿಂದ ಹೆಬ್ಬಿಗೆ ಮತ್ತು ಬರುವೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಿಸಲಾಗಿತ್ತು.ಇದರಿಂದ ಹೆಬ್ಬಿಗೆ, ಬರುವೆ ಹಾಗೂ ಚಿಮಲೆ ಗ್ರಾಮಗಳ ಸುಮಾರು 900 ಜನರಿಗೆ ನಿಟ್ಟೂರು ಪೇಟೆ ಸಂಪರ್ಕಿಸಲು ಅನುಕೂಲವಾಗಿತ್ತು.
ದ್ವಿಚಕ್ರ ವಾಹನ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಮಾತ್ರ ಸೇತುವೆ ಬಳಸಬಹುದಾಗಿದ್ದರೂ ಈ ಭಾಗದ ಜನರ ಸಂಕಷ್ಟದ ಪ್ರಮಾಣ ಕಡಿಮೆಯಾಗಿ ನಿಟ್ಟುಸಿರು ಬಿಡುವಂತಾಗಿತ್ತು.ತೂಗು ಸೇತುವೆಯು ಸಂಪೂರ್ಣ ಕಬ್ಬಿಣದಿಂದಲೇ ತಯಾರಾಗಿದ್ದು, ಪ್ರತೀ 2 ವರ್ಷಗಳಿಗೆ ಒಮ್ಮೆ ಗ್ರೀಸ್, ಪೈಂಟ್ ಹೊಡೆಯುವುದು ಕಡ್ಡಾಯವಾಗಿದೆ.
ಆದರೆ, ಸೇತುವೆ ನಿರ್ಮಾಣವಾಗಿ 10 ವರ್ಷಗಳೆ ಕಳೆದುಹೋಗಿದ್ದರೂ ಸಹ ಇದುವರೆಗೆ ಒಮ್ಮೆಯೂ ಯಾವುದೇ ನಿರ್ವಹಣೆ ಮಾಡದೇ, ಸೇತುವೆಯ ಎರಡೂ ರೋಪ್‌ಗಳು ಸಡಿಲಗೊಂಡಿದ್ದು, ಗಾಳಿ ಮಳೆಗೆ ವಿಪರೀತ ಅನ್ನುವಷ್ಟು ತೂಗುತ್ತಿವೆ.
ಇದರ ಮೇಲೆ ಸಂಚಾರ ಮಾಡುವವರು ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ.ತೂಗು ಸೇತುವೆ ನಿರ್ವಹಣೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು 20 ಲಕ್ಷ ರೂ.ಗಳನ್ನು ಎರಡು ವರ್ಷಗಳ ಹಿಂದೆಯೇ ರಾಜ್ಯ ಬೃಹತ್ ನೀರಾವರಿ ನಿಗಮದ ಮೂಲಕ ಬಿಡುಗಡೆ ಮಾಡಿಸಿದ್ದರೂ ಸಹ ಸೇತುವೆ ನಿರ್ವಹಣೆ ಮಾತ್ರ ಇನ್ನೂ ನಡೆದಿಲ್ಲ.
ನಿಗಮದ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ತೂಗು ಸೇತುವೆ ನಿರ್ವಹಣೆಗೆ ಎಸ್ ಆರ್ ರೇಟ್ ಇಲ್ಲದೇ ಸಮಸ್ಯೆಯಾಗಿದೆ. ಹಾಗಾಗಿ, ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ.ಹೆಬ್ಬಿಗೆ ತೂಗು ಸೇತುವೆಯು ಮಲೆನಾಡ ಹಸಿರು ಸಿರಿಯ ಮಧ್ಯೆ ಇರುವುದರಿಂದ ಸಹಜವಾಗೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.
ಈ ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ಜನವಸತಿ ಇಲ್ಲದ ಕಾರಣ ಪ್ರವಾಸಿಗರ ಮೋಜು ಮಸ್ತಿ, ಹುಡುಗ-ಹುಡುಗಿಯರ ಚೆಲ್ಲಾಟ, ಸೇತುವೆಯ ಮೇಲೆ ಬೇಕಾಬಿಟ್ಟಿ ವರ್ತನೆಯಿಂದ ನಿರ್ವಹಣೆ ಇಲ್ಲದೆ ಬಳಲಿರುವ ಹೆಬ್ಬಿಗೆ ತೂಗು ಸೇತುವೆಗೆ ಏನಾದರೂ ಆದರೆ ಎಂಬ ತೀವ್ರ ಆತಂಕಗೊಳ್ಳುವಂತೆ ಮಾಡಿದೆ.
ದಾಂಧಲೆ ಮಾಡುವ ಪ್ರವಾಸಿಗರನ್ನು ನಿಯಂತ್ರಿಸಲು ಗ್ರಾಮಾಡಳಿತವಾಗಲಿ, ಪೊಲೀಸರಾಗಲಿ ಗಮನಹರಿಸದಿರುವುದು ವಿಷಾದಕರ.ನಿಟ್ಟೂರು ಪೇಟೆ ಸಂಪರ್ಕಿಸಲು ತೂಗು ಸೇತುವೆ ನಮಗೆ ಅನಿವಾರ್ಯವಾಗಿದೆ. ಮಳೆ, ಗಾಳಿ ಸಮಯದಲ್ಲಿ ಸೇತುವೆ ವಿಪರೀತ ತೂಗುತ್ತಾ ಶಬ್ಧ ಮಾಡುವುದರಿಂದ ಓಡಾಡಲು ಭಯವಾಗುತ್ತದೆ.
ಪ್ರವಾಸಿಗರ ಅನುಚಿತ ವರ್ತನೆಯಿಂದ ಮಹಿಳೆಯರು, ಮಕ್ಕಳು ಒಬ್ಬೊಬ್ಬರೆ ಸೇತುವೆ ಮೇಲೆ ಓಡಾಡಲು ಭಯವಾಗುತ್ತದೆ ಎಂದು ದಿವಾಕರ ಹೆಗಡೆ ಎಂಬವರು ಹೇಳಿದ್ದಾರೆ.ತೂಗು ಸೇತುವೆ ನಿರ್ವಹಣೆಗೆ 20 ಲಕ್ಷ ರೂ. ಅನುದಾನ ನೀಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ.
ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದ್ದು, ತಾಂತ್ರಿಕ ಸಮಸ್ಯೆಗಳು ಈಗ ಬಗೆಹರಿದಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ರು.