ಅಪರಾಧ

ಅಪರಾಧ ಪ್ರಕರಣ ಮುಚ್ಚಿಹಾಕಲು ಲಂಚಕ್ಕೆ ಡಿಮ್ಯಾಂಡ್‌! ಕಾನ್ಸ್‌ಟೆಬಲ್‌ ಬಂಧನ, ಇನ್ಸ್‌ಪೆಕ್ಟರ್‌ ಪರಾರಿ

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಸಂಬಂಧಿಕರಿಂದ ಲಂಚಕ್ಕೆ ಕೈಯೊಡ್ಡಿದ ಗುರುತರ ಆರೋಪಕ್ಕೆ ಚಿಕ್ಕಜಾಲ ಠಾಣೆ ಇನ್ಸ್‌ಪೆಕ್ಟರ್‌ ಪ್ರವೀಣ್‌ ಹಾಗೂ ಹೆಡ್‌ಕಾನ್ಸ್‌ಟೆಬಲ್‌ ರವಿ, ಠಾಣಾ ರೈಟರ್‌ಗಳು ಗುರಿಯಾಗಿದ್ದಾರೆ.

ಇನ್ಸ್‌ಪೆಕ್ಟರ್‌ ಪರವಾಗಿ 3.70 ಲಕ್ಷ ರೂ.ಲಂಚ ಸ್ವೀಕರಿಸಿದ ಎಚ್‌ಸಿ ರವಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಬಂಧನ ಭೀತಿಗೆ ಒಳಗಾಗಿರುವ ಇನ್ಸ್‌ಪೆಕ್ಟರ್‌ ಪ್ರವೀಣ್‌ ಎರಡು ದಿನಗಳಿಂದ ಠಾಣೆಗೆ ಹೋಗದೆ ತಲೆಮರೆಸಿಕೊಂಡಿದ್ದಾರೆ.

ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಚಿಕ್ಕಜಾಲ ಠಾಣೆಯಲ್ಲಿ ಕಾರ್ಯನಿರ್ವಹಿಸಿದ ಮೂವರು ಇನ್ಸ್‌ಪೆಕ್ಟರ್‌ಗಳು ಲಂಚದ ಉರುಳಿನಲ್ಲಿ ಸಿಲುಕಿಕೊಂಡಂತಾಗಿದೆ. ಈ ಪ್ರಕರಣ ನಗರ ಪೊಲೀಸ್‌ ವಿಭಾಗಕ್ಕೆ ಮುಜುಗರ ತಂದೊಡ್ಡಿದೆ.ಬೆಂಗಳೂರು ಜಲಮಂಡಳಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂ.

ಸ್ವೀಕರಿಸಿ ವಂಚಿಸಿದ ಆರೋಪದಲ್ಲಿ ಚಿಕ್ಕಜಾಲ ಠಾಣೆಯಲ್ಲಿ ಪ್ರಕಾಶ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕೇಸ್‌ ಸಂಬಂಧ ಅವರ ಮಾವ ದೇವರಾಜು ಠಾಣೆಗೆ ತೆರಳಿದ್ದಾಗ ಎಚ್‌ಸಿ ರವಿ ಪರಿಚಯ ಆಗಿದ್ದು, ಹಣ ನೀಡಿದರೆ ನಿಮ್ಮ ಅಳಿಯನ ವಿರುದ್ಧದ ಕೇಸ್‌ನಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಇನ್ಸ್‌ಪೆಕ್ಟರ್‌ ಪ್ರವೀಣ್‌ಗೆ 3 ಲಕ್ಷ ರೂ., ರವಿಗೆ 50 ಸಾವಿರ ರೂ., ಇಬ್ಬರು ರೈಟರ್‌ಗಳಿಗೆ 30 ಸಾವಿರ ರೂ. ಎಂದು ಹೇಳಿ ಅವರಿಂದ ಒಟ್ಟು 3.70 ಲಕ್ಷ ರೂ. ಲಂಚ ಪಡೆದುಕೊಂಡಿದ್ದರು.ಹಂತ- ಹಂತವಾಗಿ 3.70 ಲಕ್ಷ ರೂ. ಪಡೆದ ಎಚ್‌ಸಿ ಪುನಃ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.

ಇದರಿಂದ ಬೇಸತ್ತ ದೂರುದಾರ ದೇವರಾಜು ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೇವರಾಜು ನೀಡಿದ ದೂರಿನ ಅನ್ವಯ ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 7(ಎ) ಅನ್ವಯ ಮೊದಲ ಆರೋಪಿಯಾಗಿ ಇನ್ಸ್‌ಪೆಕ್ಟರ್‌ ಪ್ರವೀಣ್‌, 2ನೇ ಆರೋಪಿ ರವಿ ಸೇರಿದಂತೆ ಮತ್ತಿತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿ ರವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಲಂಚ ಸ್ವೀಕರಿಸುವಾಗಲೇ ಎಚ್‌ಸಿ ರವಿಯನ್ನು ಬಂಧಿಸಲು ಅ.6ರಂದು ಕಾರ್ಯಾಚರಣೆ ರೂಪಿಸಲಾಗಿತ್ತು.

ಲಂಚ ಪಡೆಯಲು ಬಂದಿದ್ದ ರವಿ ತಾನು ಟ್ರ್ಯಾಪ್‌ ಆಗುತ್ತಿರುವ ಅನುಮಾನದಿಂದ ಇದ್ದಕ್ಕಿದ್ದಂತೆ ಇಂದು ಬೇಡ ಮತ್ತೊಮ್ಮೆ ಪಡೆಯುವೆ ಎಂದು ನಿರಾಕರಿಸಿದ್ದರು. ಆದರೆ, ಆತ ಈ ಹಿಂದೆ ಲಂಚ ಸ್ವೀಕರಿಸಿದ್ದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಬಂಧಿಸಲಾಯಿತು.

ಈ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ಠಾಣೆಗೆ ಬರದೇ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಳೆದ ಎರಡು ವರ್ಷಗಳಲ್ಲಿ ಚಿಕ್ಕಜಾಲ ಠಾಣೆಗೆ ಆಗಮಿಸಿದ ಮೂವರು ಇನ್ಸ್‌ಪೆಕ್ಟರ್‌ಗಳು ಲಂಚ ಸ್ವೀಕಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

2021ರ ಜನವರಿಯಲ್ಲಿ ಭೂ ವ್ಯಾಜ್ಯ ಪ್ರಕರಣದಲ್ಲಿ 4 ಲಕ್ಷ ರೂ ಲಂಚ ಸ್ವೀಕಾರ ಆರೋಪದಲ್ಲಿ ಅಂದಿನ ಇನ್ಸ್‌ಪೆಕ್ಟರ್‌ ವಿ.ಯಶವಂತ್‌ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಬಳಿಕ ಯಶವಂತ್‌ ಸಸ್ಪೆಂಡ್‌ ಆಗಿದ್ದರು.

ನಂತರ ಇನ್ಸ್‌ಪೆಕ್ಟರ್‌ ಆದ ಎಸ್‌.ಆರ್‌ ರಾಘವೇಂದ್ರ ಕೂಡ 2021ರ ಸೆ.19ರಂದು ಭೂ ವ್ಯಾಜ್ಯ ಪ್ರಕರಣದಲ್ಲಿ 2 ಲಕ್ಷ ರೂ. ಲಂಚ ಸ್ವೀಕರಿಸಿ ಎಸಿಬಿ ಅಧಿಕಾರಿಗಳಿಂದ ಬಂಧಿತರಾಗಿ ಜೈಲು ಸೇರಿದ್ದರು. ಈಗ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್‌ ಕೂಡ ಲಂಚದ ಉರುಳಿನಲ್ಲಿ ಸಿಲುಕಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button