
ಬಡವರಿಗೆ ಅನುಕೂಲವಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಆದರೆ ಬಡವರ ಹಸಿವನ್ನು ತೀರಿಸುವ ಉದ್ದೇಶಕ್ಕಾಗಿ ಜಾರಿಗೆ ತಂದ ಈ ಯೋಜನೆಗೆ ನಿರಂತರ ಕನ್ನ ಹಾಕುವ ಪ್ರಯತ್ನಗಳು ನಡೆಯುತ್ತಿವೆ.
ಹೌದು, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿರುವ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 834 ಪ್ರಕರಣಗಳು ದಾಖಲಾಗಿವೆ.
ಇಂತಹ ಮಹತ್ವದ ಯೋಜನೆಗೆ ಕನ್ನ ಹಾಕುತ್ತಿರುವ ಖದೀಮರು ಪಡಿತರವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಖದೀಮರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಅನ್ನಭಾಗ್ಯ ಯೋಜನೆಯಡಿಯ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತಾಗಿ ಕಳೆದ ಮೂರು ವರ್ಷಗಳಲ್ಲಿ 834 ಪ್ರಕರಣಗಳು ದಾಖಲಾಗಿವೆ.
ಪ್ರಸ್ತುತ ಸಾಲಿನಲ್ಲಿ 297 ಪ್ರಕರಣಗಳು ದಾಖಲಾಗಿವೆ.2020 -21 ರಲ್ಲಿ 652021-22 ರಲ್ಲಿ 4722022-23 ರಲ್ಲಿ 297
ಅನ್ನಭಾಗ್ಯದ ಅಡಿಯಲ್ಲಿ ನೀಡಲಾಗುತ್ತಿರುವ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತಾಗಿ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಕೇಳಿದ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅಕ್ರಮ ದಾಸ್ತಾನು ಮತ್ತು ಕಾಳಸಂತೆ ವಹಿವಾಟುಗಳು ನಡೆಯುವುದನ್ನು ತಡೆಗಟ್ಟಿ, ನಿರ್ದಿಷ್ಟ, ಫಲಾನುಭವಿಗಳಿಗೆ ಪಡಿತರ ಆಹಾರ, ಧಾನ್ಯಗಳನ್ನು ತಲುಪುದನ್ನು ಖಾತರಿ ಪಡಿಸಿಕೊಳ್ಳಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ರಾಜ್ಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ, ಹೊಂದಿರ ಆದೇಶಗಳಡಿಯಲ್ಲಿ, ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ರಮ ತಡೆಯಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ, ಜೊತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವನ್ನು ರಚಿಸಲಾಗಿದೆ.
ಇದರೊಂದಿಗೆ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಲಿ 76,249.14 ಕ್ರಿಂಟಾಲ್ ಅಕ್ಕಿ, 8,591.58 ಕ್ವಿಂಟಾಲ್ ಜೋಳ, 1284.86 ಕ್ವಿಂಟಾಲ್ ಗೋಧಿ, 18,444.90 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಂಡಿದ್ದು ಇದರ ಅಂದಾಜು ಮೌಲ್ಯ ರೂ. 26,98,78,563 ಆಗಿರುತ್ತವೆ, ಪಡಿತರ ಅಕ್ರಮದಲ್ಲಿ ಪಾಲ್ಗೊಂಡ ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಹಾಗೂ ಪ್ರಕರಣದಲ್ಲಿ ವಶಪಡಿಸಿಕೊಂಡ ಅಗತ್ಯ ವಸ್ತುಗಳನ್ನು ಜಪ್ತಿ ಮಾಡಿ ಸರ್ಕಾರಕ್ಕೆ, ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.