ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಧ್ಯೇಯದೊಂದಿಗೆ ಜಾರಿಯಾಗಿರುವ ಅನ್ನಭಾಗ್ಯ ಯೋಜನೆಗೆ ನಿರಂತರವಾಗಿ ಕನ್ನ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೂ ರಾಜ್ಯದಲ್ಲಿ ನಕಲಿ ನ್ಯಾಯಬೆಲೆ ಅಂಗಡಿಗಳು ಹಾಗೂ ಗ್ರಾಹಕರ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್) ಅಕ್ರಮವಾಗಿ ರೇಷನ್ ಎತ್ತುವಳಿ ಮಾಡುತ್ತಿವೆ.
ರಾಜ್ಯದಲ್ಲಿ 1,15,82,636 ಬಿಪಿಎಲ್, 23,96,619 ಎಪಿಎಲ್ ಹಾಗೂ 10,90,818 ಅಂತ್ಯೋದಯ ಸೇರಿ ಒಟ್ಟು 1,50,70,073 ರೇಷನ್ ಕಾರ್ಡ್‍ಗಳಿಗೆ ಪ್ರತಿ ತಿಂಗಳು 20,204 ನ್ಯಾಯಬೆಲೆ ಅಂಗಡಿ ಸೇರಿ ಸಿಸಿಎಸ್‍ಗಳು ರೇಷನ್ ವಿತರಿಸುವ ಕಾರ್ಯದಲ್ಲಿ ತೊಡಗಿವೆ.
ಆದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಸರಿನಲ್ಲಿ ¾ಬೇರೆ ಯಾರೋ ಅನಾಮಿಕ ವ್ಯಕ್ತಿಗಳು, ಪರವಾನಗಿ ನವೀಕರಣ ಮಾಡದ ನ್ಯಾಯಬೆಲೆ ಅಂಗಡಿಗಳು ಹಾಗೂ ಸಿಸಿಎಸ್‍ಗಳು ಪ್ರತಿ ತಿಂಗಳು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.
ಆಹಾರ ಭದ್ರತೆ ಯೋಜನೆಯಡಿ ನಡೆಯುತ್ತಿರುವ ದೊಡ್ಡ ಮಟ್ಟದ ಅವ್ಯವಹಾರದಲ್ಲಿ ಆಹಾರ ಇಲಾಖೆಯ ಆಯಾ ಜಿಲ್ಲೆಯ ಉಪ ನಿರ್ದೇಶಕರು, ಆಹಾರ ನಿರೀಕ್ಷಕರು ಹಾಗೂ ಸಗಟು ಮಳಿಗೆಗಳ ವ್ಯವಸ್ಥಾಪಕರು ಶಾಮೀಲಾಗಿದ್ದಾರೆ. ಈ ಬಗ್ಗೆ ಇಲಾಖೆಗೂ ವ್ಯಾಪಕ ದೂರುಗಳು ಬರಲಾರಂಭಿಸಿವೆ.
ಪಡಿತರ ವಿತರಿಸುವ ಕನ್‍ಜ್ಯೂಮರ್ಸ್ ಕ್ರೆಡಿಟ್ ಸೊಸೈಟಿಗಳು ಪ್ರತಿ ವರ್ಷಕ್ಕೊಮ್ಮೆ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಬೇಕೆಂಬ ನಿಯಮವಿದೆ. ಆದರೆ ಸಾಕಷ್ಟು ಸಿಸಿಎಸ್‍ಗಳು ಪರವಾನಗಿ ನವೀಕರಣ ಮಾಡದೆ ಅಕ್ರಮವಾಗಿ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿವೆ.
ಅದೇ ರೀತಿ, ಪ್ರತಿ ಐದು ವರ್ಷಕ್ಕೊಮ್ಮೆ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರಾಕಾರ ನವೀಕರಣ ಮಾಡಬೇಕಿತ್ತು. ಆದರೆ, ಕೆಲ ಮಾಲೀಕರು ಪರವಾನಗಿ ನವೀಕರಣ ಮಾಡದೆ ಕಾರ್ಡ್‍ದಾರರಿಗೆ ಪಡಿತರವನ್ನು ವಿತರಿಸುತ್ತಿವೆ.ಕೆಲವರು, ಬೇರೆ ಹೆಸರಿನಲ್ಲಿ ನಾಲ್ಕೈದು ಪ್ರಾಕಾರ ತೆಗೆದುಕೊಂಡು ಅಂಗಡಿ ನಡೆಸುತ್ತಿದ್ದಾರೆ.
ಅಲ್ಲದೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಥವಾ ಅವರ ಅಧಿಕೃತ ಪ್ರತಿನಿಧಿಗಳದವರು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಲು ಬರುತ್ತಿರುವ ಕುರಿತು ಗೌಪ್ಯವಾಗಿ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.ಅಕ್ಕಿ, ರಾಗಿ ಎತ್ತುವಳಿಯಲ್ಲಿ ಕೆಲವಡೆ ಅನಾಮಿಕ ವ್ಯಕ್ತಿಗಳು ಎತ್ತುವಳಿ ಮಾಡುತ್ತಿರುವ ಬಗ್ಗೆಯೂ ಇಲಾಖೆ ಗುರುತಿಸಿದೆ.
ಇಲಾಖೆಯ ಮಾರ್ಗಸೂಚಿ ಪ್ರಕಾರ ನಿಗದಿತ ದಿನಾಂಕದಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಥವಾ ಅಧಿಕೃತ ಪ್ರತಿನಿಧಿಗಳು ಸಗಟು ಮಳಿಗೆಗಳಿಗೆ ತೆರಳಿ ತಮ್ಮ ಅಂಗಡಿಗಳಿಗೆ ಹಂಚಿಕೆಯಾದ ರೇಷನ್ ಎತ್ತುವಳಿ ಮಾಡಬೇಕು.
ಆದರೆ ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮ್ಮ ಬದಲಿಗೆ ಬೇರೆಯವರನ್ನು ಕಳುಹಿಸಿ ಎತ್ತುವಳಿ ಮಾಡುತ್ತಿದ್ದಾರೆ.ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡಿರುವುದು, ಭಾರತ ಆಹಾರ ನಿಗಮ (ಎಸಿಐ) ಗೋದಾಮಿಗಳಿಂದ ಇಲಾಖೆಯ ಸಗಟು ಮಳಿಗೆಗಳಿಗೆ ಪಡಿತರ ಧಾನ್ಯಗಳನ್ನು ಸರಕು ಲಾರಿಯಲ್ಲಿ ಸಾಗಿಸುವ ವೇಳೆ ಕದಿಯುವುದು, ಇಲಾಖೆಯ ಸಗಟು ಮಳಿಗೆಗಳಲ್ಲಿ ಅಧಿಕಾರಿಗಳ ಕುಮ್ಮಕ್ಕುನಿಂದ ಹೆಚ್ಚುವರಿ ದಾಸ್ತಾನು ಸಂಗ್ರಹಣೆ, ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಲಾರಿಗಳಲ್ಲಿ ಸಾಗಿಸುವುದು, ಅನಧಿಕೃತವಾಗಿ ಅಕ್ಕಿ ಗಿರಣಿಯಲ್ಲಿ ದಾಸ್ತಾನು ಮಾಡಿರುವುದು, ಆಹಾರ ನಿರೀಕ್ಷಕರು ಹಾಗೂ ಆಹಾರ ಶಿರಸ್ತೇದಾರರು ಅಕ್ರಮವಾಗಿ ದಾಸ್ತಾನು ಮಾಡುವ ಮೂಲಕ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಲಾಗುತ್ತಿದೆ.
ಹೀಗೆ ಬೇರೆ ಬೇರೆ ಮಾರ್ಗದಲ್ಲಿ ಕನ್ನ ಹಾಕುವ ಕೆಲವರು ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಿ ಹಣ ಮಾಡುವ ದಂಧೆ ತೊಡಗಿದ್ದಾರೆ.2.17 ಲಕ್ಷ ಮೆಟ್ರಿಕ್ ಟನ್:ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರ ಪಡಿತರ ಧಾನ್ಯಗಳನ್ನು ವಿತರಣೆ ಮಾಡುತ್ತಿದೆ.
ಕೇಂದ್ರವು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 30 ರಿಂದ 35 ರೂ.ಗೆ ಖರೀದಿಸಿ ಪ್ರತಿ ಕೆಜಿಗೆ 3 ರೂ.ನಂತೆ ಅಕ್ಕಿಯನ್ನು ರಾಜ್ಯಕ್ಕೆ ನೀಡುತ್ತಿದೆ. ಆಂದಾಜು 2.17 ಲಕ್ಷ ಟನ್ ಅಕ್ಕಿಯನ್ನು ಯೋಜನೆಯಡಿ ಪ್ರತಿ ತಿಂಗಳು ಲಾನುಭವಿಗಳಿಗೆ ವಿತರಿಸಲಾಗುತ್ತದೆ.
ರಾಜ್ಯಾದ್ಯಂತ 2022ರ ಏ.1ರಿಂದ ಸೆ.30ರವರೆಗೆ 21 ಕೋಟಿ ರೂ.ಮೌಲ್ಯದ ಪಡಿತರ ಧಾನ್ಯಗಳನ್ನು ಆಹಾರ ಜಾಗೃತಿ ಮತ್ತು ತನಿಖಾ ದಳ ಜಪ್ತಿ ಮಾಡಿದೆ. 25,258 ಕ್ವಿಂಟಾಲ್ ಅಕ್ಕಿ, 18,053 ಕ್ವಿಂಟಾಲ್ ರಾಗಿ, 5,534 ಕ್ವಿಂಟಾಲ್ ಭತ್ತ, 5,577 ಕ್ವಿಂಟಾಲ್ ಜೋಳ ಸೇರಿ ಒಟ್ಟು 61,079 ಕ್ವಿಂಟಾಲ್ ಅಗತ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.