ಅನುದಾನಿತ ಶಾಲಾ ಶಿಕ್ಷಕರಿಂದ ಪಾದಯಾತ್ರೆ; ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು/ನೆಲಮಂಗಲ: ರಾಜ್ಯದ ಅನುದಾನಿತ ಶಾಲಾ- ಕಾಲೇಜುಗಳಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ನೌಕರರು ನಿಶ್ಚಿತ ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯದ ಬೇಡಿಕೆ ಮುಂದಿಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.ಅ.10ರಂದು ಫ್ರೀಡಂಪಾರ್ಕ್ ನಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆಯು, ಎರಡನೇ ದಿನವಾದ ಶನಿವಾರ ಸಿದ್ಧಗಂಗಾ ಮಠದಿಂದ ದಾಬಸ್‌ಪೇಟೆ ಮಾರ್ಗವಾಗಿ ನೆಲಮಂಗಲ ತಲುಪಿತು. ನೌಕರರು ಅರೆಬೆತ್ತಲೆಯಾಗಿ ಪಾದಯಾತ್ರೆ ನಡೆಸಿ, ಸರಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿದರು.
ಭಾನುವಾರ ರಾತ್ರಿ ವೇಳೆಗೆ ಬೆಂಗಳೂರು ತಲುಪಲಿದ್ದು, ಸೋಮವಾರ ಸಾವಿರಾರೂ ಜನರು ಫ್ರೀಡಂ ಪಾರ್ಕ್ ನಲ್ಲಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಪಾದಯಾತ್ರೆಯಲ್ಲಿರುವ ಶಿಕ್ಷಕರನ್ನು ಭೇಟಿ ಮಾಡಿ, ಹೋರಾಟಕ್ಕೆ ಸಾಥ್ ನೀಡಿದರು. ”ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು, ನೌಕರರಿಗೆ ಸರಕಾರ ಹಳೇ ಪಿಂಚಣಿಯಾಗಲಿ ಅಥವಾ ಹೊಸ ಪಿಂಚಣಿ ವ್ಯವಸ್ಥೆಯನ್ನಾಗಲಿ ಜಾರಿಗೊಳಿಸುತ್ತಿಲ್ಲ.
ಪಿಂಚಣಿ ಸೌಲಭ್ಯದಿಂದ ವಂಚಿತರಾಗಿ ನಿವೃತ್ತರಾಗಿರುವ ಸುಮಾರು 3 ಸಾವಿರ ಶಿಕ್ಷಕರ ಸಂಕಷ್ಟ ಹೇಳತೀರದಾಗಿದೆ. ಇದರಿಂದಾಗಿ ನಾನು ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ,” ಎಂದು ಭರವಸೆ ನೀಡಿದರು.ಭಾನುವಾರದಿಂದ ರಸ್ತೆಯಲ್ಲೇ ಎಲ್ಲನೌಕರರು ಉರುಳು ಸೇವೆ ಮಾಡುವ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಅ. 10ರಂದು ಸೋಮವಾರ ಶಿಕ್ಷರು ಹಾಗೂ ನೌಕರರು ತಮ್ಮ ಕುಟುಂಬ ಸದಸ್ಯರೊಂದಿಗೆ ಫ್ರೀಡಂ ಪಾರ್ಕ್ನಲ್ಲಿಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ” ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ತಿಳಿಸಿದರು.