ರಾಜಕೀಯರಾಷ್ಟ್ರಿಯ

ಅನಾರೋಗ್ಯದ ಕಾರಣ ಇಡಿ ವಿಚಾರಣೆಗೆ ಹಾಜರಾಗಲು 3 ವಾರಗಳ ಕಾಲ ಸಮಯ ಕೋರಿದ ಸೋನಿಯಾ ಗಾಂಧಿ

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇನ್ನೂ ಕೊರೊನಾ ಸೋಂಕಿನಿಂದ ಗುಣವಾಗಿಲ್ಲ. ಅವರ ಕೋವಿಡ್ ವರದಿ ಮತ್ತೆ ಪಾಸಿಟಿವ್ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಿಗದಿತ ಸಮಯದ ನಂತರ ಮತ್ತೊಮ್ಮೆ ಅವರ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆದರೆ, ಅಲ್ಲಿಯವರೆಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮೂರು ವಾರಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಈ ಬಗ್ಗೆ ಇಡಿ ಇನ್ನೂ ಯಾವುದೇ ಉತ್ತರ ನೀಡಿಲ್ಲ ಎಂದು ವರದಿಯಾಗಿದೆ.

ಆದರೆ, ನ್ಯಾಷನಲ್ ಹೆರಾಲ್ಡ್‌ ಪ್ರಕರಣ ಸಂಬಂಧ ಕಾಂಗ್ರೆಸ್ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ಜಾರಿ ನಿರ್ದೇಶನಾಲಯ (ED) ವಿಚಾರಣೆಗೆ ಹಾಜರಾಗಲಿದ್ದಾರೆ. ಇಡಿ ಎದುರು ಏನನ್ನೂ ಮುಚ್ಚಿಡುವ ಅಗತ್ಯ ನಮ್ಮ ನಾಯಕರಿಗೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿದೆ.

ಪಕ್ಷದ ವಕ್ತಾರ ಪವನ್ ಖೇರಾ ನೀಡಿರುವ ಹೇಳಿಕೆಯಲ್ಲಿ, ನಾವು ನಿಯಮಗಳನ್ನು ಅನುಸರಿಸುತ್ತೇವೆ. ನಮ್ಮ ಅಧ್ಯಕ್ಷರನ್ನು ಕರೆದರೆ, ಅವರು ಖಂಡಿತವಾಗಿಯೂ ಹಾಜರಾಗುತ್ತಾರೆ. ನಮಗೆ ಯಾವುದೇ ಭಯ ಮತ್ತು ಗಾಬರಿ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ಗುರುವಾರವಷ್ಟೇ ಸೋನಿಯಾ ಗಾಂಧಿ ಅವರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವಯಂ ಐಸೋಲೇಷನ್‌ಗೆ ಒಳಪಟ್ಟಿರುವ ಸೋನಿಯಾ ಗಾಂಧಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಇನ್ನೂ ಕೂಡಾ ಸೋನಿಯಾ ಗಾಂಧಿ ಅವರ ಕೋವಿಡ್ ವರದಿ ನೆಗೆಟಿವ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಿಲ್ಲ. ಜೂನ್ 8 ಬುಧವಾರ ಸೋನಿಯಾ ಗಾಂಧಿ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಕೋವಿಡ್ ಕಾರಣದಿಂದ ಅವರು ಸಮಯಾವಕಾಶ ಕೇಳಿದ್ದಾರೆ.

ಇನ್ನು ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿ ಇರುವ ಹಿನ್ನೆಲೆಯಲ್ಲಿ ಅವರೂ ಕೂಡಾ ಇಡಿ ಎದುರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದರು. ಜೂನ್ 2 ರಂದು ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಆ ಬಳಿಕ ಜೂನ್ 13ರಂದು ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಸೂಚಿಸಿತ್ತು. ಇದೀಗ ರಾಹುಲ್ ಗಾಂಧಿ ಅವರು ವಿದೇಶದಿಂದ ಮರಳಿದ ಬಳಿಕ ಜೂನ್ 13 ರಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಯು ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯ ಮಾಲೀಕತ್ವ ಹೊಂದಿತ್ತು. ಆದರೆ, ನಷ್ಟದಲ್ಲಿದ್ದ ಈ ಕಂಪನಿಯನ್ನು ಯಂಗ್ ಇಂಡಿಯಾ ಸಂಸ್ಥೆ ಖರೀದಿಸಿತ್ತು. ಈ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ಅಕ್ರಮ ಹಣ ವರ್ಗಾವಣೆ ಆಗಿದೆ, ಖರೀದಿ ಪ್ರಕ್ರಿಯೆ ಕಾನೂನು ಬದ್ಧವಾಗಿ ನಡೆದಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಕುರಿತಾಗಿ ಇಡಿ ತನಿಖೆ ನಡೆಸುತ್ತಿದೆ.

Related Articles

Leave a Reply

Your email address will not be published. Required fields are marked *

Back to top button