
ರಾಜ್ಯ ಸರ್ಕಾರದಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಪ್ರಾರಂಭಿಸಿರುವ ಶಾಲೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ತೆಗೆದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅನಧಿಕೃತ ಶಾಲೆಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 30, 31 ಅಡಿ ನೋಂದಣಿ ಪಡೆಯದ ಶಾಲೆಗಳು ಹಾಗೂ ಶಾಲಾ ಮಾನ್ಯತೆಯನ್ನು 1 ವರ್ಷಕ್ಕಿಂತ ಹೆಚ್ಚು ನವೀಕರಣ ಮಾಡದಿರುವ ಶಾಲೆಗಳನ್ನು ಗುರುತಿಸಬೇಕು ಎಂದು ನಿದೇರ್ಶನ ನೀಡಲಾಗಿದೆ.
ಹೀಗಾಗಿ ಪ್ರತಿ ಜಿಲ್ಲೇಗಳಲ್ಲಿ ಶಾಲೆಗಳ ಮಾಹಿತಿ ಸಂಗ್ರಹಕ್ಕೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೇಯಲ್ಲಿ ಡಿಡಿಪಿಐ ಗಳು ಅನಧಿಕೃತ ಶಾಲೆಗಳನ್ನ ಪಟ್ಟಿ ಮಾಡುವಂತೆ ಸೂಚಿಸಿದೆ.
1983ರ ಕಲಂ 36, ಆರ್ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಮಾಡಿದ ಶಾಲೆಗಳುಅನಧಿಕೃತವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ ಶಾಲೆಗಳ ಮೇಲೆ ಸೂಕ್ತ ಕ್ರಮವಾಗಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇಲಾಖೆಯಿಂದ ನೋಂದಣಿ ಪಡೆಯದ ಉಪಶಾಲೆಗಳು ಹೆಚ್ಚುವರಿ ತರಗತಿಯನ್ನು ಅನುಮತಿ ಪಡೆಯದೇ ಪ್ರಾರಂಭಿಸಿರುವ ಶಾಲೆಗಳು, ಅನುಮತಿ ಪಡೆದ ನಂತರ ಮತ್ತೊಂದು ಮಾಧ್ಯಮದಲ್ಲಿ ಪಠ್ಯ ಬೋಧನೆ ಮಾಡುತ್ತಿದ್ದರೆ ಕ್ರಮವಾಗಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಸರ್ಕಾರ ಅನುಮತಿ ನೀಡಿದ ಪಠ್ಯಕ್ರಮ ಬದಲಾಗಿ ಬೇರೆ ಪಠ್ಯ ಬೋಧನೆ ಮಾಡುವ ಶಾಲೆಗಳು ಶಾಲೆ ಸ್ಥಾಪನೆಗೆ ಅನುಮತಿ ಕೊಟ್ಟ ಜಾಗದಿಂದ ಅನುಮತಿ ಪಡೆಯದೇ ಸ್ಥಳಾಂತರ ಮಾಡಿದ ಶಾಲೆಗಳು ಅನುಮತಿ ಪಡೆಯದೇ ಬೇರೊಂದು ಆಡಳಿತ ಮಂಡಳಿ ನಡೆಸುವುದು,
ಬೇರೆ ಪಠ್ಯಕ್ರಮದ ಅನುಮತಿ ಪಡೆದ ಬಳಿಕವೂ ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳನ್ನು ಗುರುತಿಸಿ ಶಿಸ್ತು ಕ್ರಮದ ಅನಿವಾರ್ಯತೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅನಧಿಕೃತ ಖಾಸಗಿ ಶಾಲೆಗಳ ಪಟ್ಟಿ ಮಾಡಲು ಅಭಿಯಾನ ಆರಂಭವಾಗಿತ್ತು. ಇದೀಗ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಮಾನದಂಡಗಳು ಇದ್ದರೆ ಮಾತ್ರ ಆ ಶಾಲೆಗಳು ಅಧಿಕೃತ ಎಂದು ಪರಿಗಣಿಸಲಾಗುತ್ತದೆ.
ಸರ್ಕಾರದ ನಿಯಮ ಪಾಲನೆ ಮಾಡದೇ ಇರುವ ಶಾಲೆಗಳಿಗೆ ಬೀಗ ಬೀಳುವುದು ಖಚಿತವಾಗಿದೆ.ಕೆಲ ದಿನಗಳ ಹಿಂದೆ ಖಾಸಗಿ ಆಡಳಿತ ಮಂಡಳಿಯವರು ಶಿಕ್ಷಣ ಇಲಾಖೆಯಲ್ಲೂ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು.
ಇದರ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ಅನಧಿಕೃತ ಶಾಲೆಗಳ ಮೇಲೆ ಪ್ರಹಾರ ನಡೆಸಲು ಮುಂದಾಗಿದ್ದು, ಅನಧಿಕೃತ ಖಾಸಗಿ ಶಾಲೆಗಳ ತೆರವಿಗಾಗಿ ಬೀಗ ಜಡಿಯಲು ಮುಂದಾಗಿದೆ.