Uncategorized

ಅತ್ಯಾಧುನಿಕ ಟರ್ಮಿನಲ್ ಇಂದಿನಿಂದ ಕಾರ್ಯಾಚರಣೆ

ಬರೋಬ್ಬರಿ ೩೧೫ ಕೋಟಿ ರೂ.ಗಳ ವೆಚ್ಚದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಿರುವ ದೇಶದ ಮೊಟ್ಟ ಮೊದಲ “ಹವಾನಿಯಂತ್ರಿತ ಟರ್ಮಿನಲ್” ಇಂದು ಸಂಜೆಯಿಂದ ಕಾರ್ಯಾಚರಣೆ ಪ್ರಾರಂಭಿಸಲಿದೆ.

ನೈಋತ್ಯ ರೈಲ್ವೆ ನಗರದ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಸುಮಾರು ೫೦ ರೈಲುಗಳ ಪ್ರಯಾಣ ಆರಂಭವಾಗಲಿದೆ.

ಪ್ರಮುಖವಾಗಿ ಮೂರು ಜೋಡಿ ರೈಲುಗಳು ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಇಂದು ಸಂಜೆಯಿಂದ ಪ್ರಾರಂಭವಾಗಿ ಕೊನೆಗೊಳ್ಳುತ್ತವೆ.

ಇಂದು ಸಂಜೆ ಎಸ್‌ಎಂವಿಬಿ – ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (೧೨೬೮೪), ಮಂಗಳವಾರ ಮತ್ತು ಗುರುವಾರ ಸಂಜೆ ೭ ಗಂಟೆಗೆ ಟರ್ಮಿನಲ್ ನಿಂದ ಸಂಚಾರ ಪ್ರಾರಂಭಿಸಲಿದೆ.

ಮತ್ತೆ ಎರ್ನಾಕುಲಂ – ಎಸ್‌ಎಂವಿಬಿ ಎಕ್ಸ್ ಪ್ರೆಸ್ (೧೨೬೮೩) ಸೋಮವಾರ, ಮಂಗಳವಾರ ಮತ್ತು ಗುರುವಾರ ಬೆಳಿಗ್ಗೆ ೩.೫೫ ಕ್ಕೆ ಟರ್ಮಿನಲ್ ನಲ್ಲಿ ಕೊನೆಗೊಳ್ಳುತ್ತದೆ.

ಅದೇ ರೀತಿ, ಎಸ್‌ಎಂವಿಬಿ – ಕೊಚುವೇಲಿ ಬೈ-ವೀಕ್ಲಿ ಹಮ್ಸಫರ್ ಎಕ್ಸ್ ಪ್ರೆಸ್ (೧೬೩೨೦) ಜೂ.೧೦ ರಿಂದ ಶುಕ್ರವಾರ ಮತ್ತು ಭಾನುವಾರ ಸಂಜೆ ೭ ಗಂಟೆಗೆ ಟರ್ಮಿನಲ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು (೧೬೩೧೯) ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ ೧೦.೧೦ ಕ್ಕೆ ಕೊನೆಗೊಳ್ಳುತ್ತದೆ.

ಎಸ್‌ಎಂವಿಬಿ – ಪಾಟ್ನಾ ಸಾಪ್ತಾಹಿಕ ಹಮ್ಸಫರ್ ಎಕ್ಸ್ಪ್ರೆಯಸ್ (೨೨೩೫೪) ಜೂನ್ ೧೨ ರಿಂದ ಜಾರಿಗೆ ಬರುವಂತೆ ಭಾನುವಾರ ಮಧ್ಯಾಹ್ನ ೧.೫೦ ಕ್ಕೆ ಟರ್ಮಿನಲ್ ನಿಂದ ಪ್ರಾರಂಭವಾಗುತ್ತದೆ.

ಜೂನ್ ೧೬ ರಿಂದ ಪಾಟ್ನಾದಿಂದ ಹೊರಡುವ ಪಾಟ್ನಾ – ಬಾಣಸವಾಡಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ (೨೨೩೫೩) ಎಸ್‌ಎಂವಿಬಿಯಲ್ಲಿ ಶನಿವಾರ ಸಂಜೆ ೫.೧೦ ಕ್ಕೆ ಕೊನೆಗೊಳ್ಳುತ್ತದೆ.

ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸುಮಾರು ೩೧೪ ಕೋಟಿ ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ವಿಮಾನ ನಿಲ್ದಾಣ ಮಾದರಿಯಲ್ಲಿ ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಈ ರೈಲು ನಿಲ್ದಾಣಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ನಾಮಕರಣ ಮಾಡಲಾಗಿದೆ. ಈ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡು ಸುಮಾರು ಒಂದು ವರ್ಷದ ಬಳಿಕ ರೈಲುಗಳ ಸಂಚಾರಕ್ಕೆ ಮುಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿವೊಬ್ಬರು,ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಮೊದಲು ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ ಎಂದೂ ಉಲ್ಲೇಖಿಸಿದರು.

ರೈಲು ವಿವರ, ಎಲ್ಲಿಂದ ಎಲ್ಲಿಗೆ?ನೈಋತ್ಯ ರೈಲ್ವೆ ಎರ್ನಾಕುಲಂ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (೧೨೬೮೩/ ೧೨೬೮೪), ಕೊಚ್ಚುವೆಲಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ (೧೬೩೧೯/ ೧೬೩೨೦) ಮತ್ತು ಪಾಟ್ನಾ-ಸರ್.

ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (೨೨೩೫೩/ ೨೨೩೫೪) ರೈಲುಗಳನ್ನು ಜೂನ್ ೬ರಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಓಡಿಸಲಿದೆ ಎಂದು ಈಗಾಗಲೇ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಟರ್ಮಿನಲ್ ವಿಶೇಷತೆ ಏನು?ನೈಋತ್ಯ ರೈಲ್ವೆ ಸುಮಾರು ೩೧೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ.ಈ ಮೂಲಕ ಬೆಂಗಳೂರಿನ ಭವ್ಯ ಕಟ್ಟಡಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ೪,೨೦೦ ಚದರ ಮೀಟರ್ ವಿಸ್ತೀರ್ಣದ ಈ ರೈಲು ನಿಲ್ದಾಣದಲ್ಲಿ ಡಿಜಿಟಲ್ ಮೂಲಕ ರೈಲು ಸಂಚಾರದ ರಿಯಲ್ ಟೈಂ ಮಾಹಿತಿ ಪ್ರಯಾಣಿಕರಿಗೆ ಸಿಗಲಿದೆ.

೪ ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ, ವಿಐಪಿ ಲಾಂಜ್, ಫುಡ್‌ಕೋರ್ಟ್, ೨೫೦ ನಾಲ್ಕು ಚಕ್ರ, ೯೦೦ ಬೈಕ್‌ಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. ೭ ಫ್ಲಾಟ್‌ಫಾರಂಗಳನ್ನು ನಿಲ್ದಾಣ ಹೊಂದಿದೆ.

ನಿಲ್ದಾಣದಿಂದ ೫೦ ಜೋಡಿ ರೈಲುಗಳನ್ನು ಓಡಿಸಲು ಇಲಾಖೆ ಗುರಿ ಹೊಂದಿದೆ.ಬಿಎಂಟಿಸಿ ಸೌಲಭ್ಯ..!ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಜನರು ಸಂಚಾರ ನಡೆಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಪರ್ಕ ಬಸ್‌ಗಳನ್ನು ಓಡಿಸಲಿದೆ.

ಸ್ಥಳ, ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ. ರೈಲು ನಿಲ್ದಾಣಕ್ಕೆ ಹೋಗುವ ಜನರು ಈ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಎಂಟಿಸಿ ಮನವಿ ಮಾಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button