ಅತ್ಯಾಚಾರದ ದೂರು ನೀಡಲು ಬಂದ ಸಂತ್ರಸ್ತೆ ಮೇಲೆಯೇ ಠಾಣಾಧಿಕಾರಿ ಅತ್ಯಾಚಾರ!

ಲಖನೌ: ಅತ್ಯಾಚಾರ ಪ್ರಕರಣದ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ 13 ವರ್ಷದ ಸಂತ್ರಸ್ತ ಬಾಲಕಿಯ ಮೇಲೆ ಠಾಣೆಯ ಪೊಲೀಸ್ ಅಧಿಕಾರಿ ಕೂಡ ಅತ್ಯಾಚಾರ ಎಸಗಿದ ಅಮಾನುಷ ಘಟನೆ ಉತ್ತರ ಪ್ರದೇಶ ಲಲಿತಪುರದಲ್ಲಿ ವರದಿಯಾಗಿದೆ.
ನಾಲ್ವರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಬಾಲಕಿ ಆರೋಪಿಸಿದ್ದಾಳೆ. ಈ ಕೃತ್ಯದ ಬಗ್ಗೆ ದೂರು ನೀಡುವ ಸಲುವಾಗಿ ಸಂಬಂಧಿಕರೊಬ್ಬರ ಜತೆ ಪೊಲೀಸ್ ಠಾಣೆಗೆ ಹೋಗಿದ್ದಾಗ ಮತ್ತೆ ಅತ್ಯಾಚಾರ ಎಸಗಲಾಗಿದೆ ಎಂದು ದೂರಿದ್ದಾಳೆ. ಆರೋಪಿ ಅಧಿಕಾರಿ, ಸ್ಟೇಷನ್ ಹೌಸ್ ಆಫೀಸರ್ ತಿಲಕ್‌ಧಾರಿ ಸರೋಜ್ ಅವರನ್ನು ಅಮಾನತು ಮಾಡಿದ್ದು, ಅವರ ವಿರುದ್ಧ ಅಪರಾಧ ಪ್ರಕರಣ ದಾಖಲು ಮಾಡಲಾಗಿದೆ.
ಆರೋಪಿ ಅಧಿಕಾರಿ ತಿಲಕ್‌ಧಾರಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಎಂದು ಲಲಿತಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಾಲಕಿಗೆ ಆಮಿಷವೊಡ್ಡಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಏಪ್ರಿಲ್ 22ರಂದು ಭೋಪಾಲ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆ ಮೇಲೆ ನಾಲ್ಕು ದಿನ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿಯ ತಂದೆ ಮಂಗಳವಾರ ದಾಖಲಿಸಿರುವ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಬಳಿಕ ಆರೋಪಿಗಳು ಬಾಲಕಿಯನ್ನು ಆಕೆಯ ಹಳ್ಳಿಗೆ ವಾಪಸ್ ಕರೆದುಕೊಂಡು ಬಂದಿದ್ದರು. ಸಂಬಂಧಿತ ಪೊಲೀಸ್ ಠಾಣೆ ಬಳಿ ಆಕೆಯನ್ನು ಬಿಟ್ಟು, ಅಲ್ಲಿಂದ ಪರಾರಿಯಾಗಿದ್ದರು.
ಪೊಲೀಸ್ ಠಾಣೆಯ ಉಸ್ತುವಾರಿಯಾಗಿದ್ದ ಆರೋಪಿ ಅಧಿಕಾರಿಯು ಬಾಲಕಿಯನ್ನು ಆಕೆಯ ಸಂಬಂಧಿಯೊಬ್ಬರಿಗೆ ಒಪ್ಪಿಸಿದ್ದರು. ಆಕೆಯಿಂದ ಹೇಳಿಕೆ ಪಡೆದುಕೊಳ್ಳುವ ಸಲುವಾಗಿ ಮರುದಿನ ಮತ್ತೆ ಸ್ಟೇಷನ್‌ಗೆ ಕರೆಯಿಸಿಕೊಂಡಿದ್ದರು. ಮರುದಿನ ಪೊಲೀಸ್ ಠಾಣೆಯಲ್ಲಿನ ಕೊಠಡಿಯೊಂದಕ್ಕೆ ಬಾಲಕಿಯನ್ನು ಕರೆದೊಯ್ದ ಆರೋಪಿ ಅಧಿಕಾರಿ, ಆಕೆಯ ಸಂಬಂಧಿಯ ಎದುರಿನಲ್ಲಿಯೇ ಮತ್ತೆ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ. ಬಾಲಕಿಯ ಸಂಬಂಧಿಯನ್ನು ಕೂಡ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಪೊಲೀಸ್ ಅಧಿಕಾರಿ ತಿಲಕ್‌ಧಾರಿ ವಿರುದ್ಧ ಅತ್ಯಾಚಾರ ಪ್ರಕರಣ ಹಾಗೂ ಕಠಿಣ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಲಲಿತಪುರ ಪೊಲೀಸರು ತಿಳಿಸಿದ್ದಾರೆ.
“ಎಸ್‌ಎಚ್‌ಒನನ್ನು ಅಮಾನತು ಮಾಡಲಾಗಿದೆ. ಅವರನ್ನು ಕ್ರಿಮಿನಲ್ ಎಂದು ಹೆಸರಿಸಲಾಗಿದೆ. ಹೀಗಾಗಿ ಅವರನ್ನು ಬಂಧಿಸಲು ತಂಡಗಳನ್ನು ನಾವು ರಚಿಸಿದ್ದೇವೆ. ಎನ್‌ಜಿಒ ಒಂದು ಬಾಲಕಿಯನ್ನು ನನ್ನ ಕಚೇರಿಗೆ ಕರೆದುಕೊಂಡು ಬಂದಿತ್ತು. ಆಕೆ ಅವರಿಗೆ ವಿವರ ನೀಡಿದ್ದಳು. ನನಗೆ ಅದರ ಬಗ್ಗೆ ಮಾಹಿತಿ ನೀಡಿದ ಬಳಿಕ, ಪ್ರಕರಣ ದಾಖಲಾಗುವಂತೆ ನೋಡಿಕೊಂಡಿದ್ದೇನೆ” ಎಂದು ಲಲಿತಪುರ ಪೊಲೀಸ್ ಮುಖ್ಯಸ್ಥ ನಿಖಿಲ್ ಪಾಠಕ್ ತಿಳಿಸಿದ್ದಾರೆ.