
ಬೆಂಗಳೂರು: ಇದೊಂದು ತೀವ್ರ ಕುತೂಹಲಕಾರಿ ಅಪರಾಧ ಸುದ್ದಿ. ಆ ಮನೆಯಲ್ಲಿದ್ದಿದ್ದು ಒಬ್ಬ ಅಜ್ಜಿ, ಆಕೆಯ ಮಗಳು ಹಾಗೂ ಆಕೆಯ ಮೊಮ್ಮಗ. ಅಜ್ಜಿಯ ಮಗಳು ಮನೆ ಜಗಳದ ವೇಳೆ ಆಕಸ್ಮಿಕವಾಗಿ ಆ ಅಜ್ಜಿಯನ್ನು ಕೊಂದಿದ್ದಾರೆ.
ಆಕಸ್ಮಿಕವಾಗಿ ನಡೆದ ಈ ಕೊಲೆಯನ್ನು ಮುಚ್ಚಿಹಾಕಲು ಅಜ್ಜಿಯ ಮಗಳು ಹಾಗೂ ಮೊಮ್ಮಗ ಶವವನ್ನು ತಾವಿದ್ದ ಕೆಂಗೇರಿ ಮನೆಯ ವಾರ್ಡ್ ರೋಬ್ ನಲ್ಲೇ ದಫನ್ ಮಾಡಿದ್ದಾರೆ! ದಿನಗಳೆದಂತೆ ಶವದ ದುರ್ವಾಸನೆ ತಡೆಯದೇ ಊರಿಗೆ ಹೋಗ್ತೇವೆಂದು ಹೋಗಿದ್ದಾರೆ.
ವರ್ಷಗಳೇ ಕಳೆದರೂ ಅವರು ಮನೆಗೆ ಬಾರದ ಕಾರಣ ಮನೆ ಮಾಲೀಕ ಬಾಡಿಗೆ ಮನೆಯೊಳಗೆ ಪ್ರವೇಶಿಸಿದಾಗ ಅಲ್ಲಿದ್ದ ಕುರುಹುಗಳು ಕೊಲೆಯ ಕಥೆ ಹೇಳಿವೆ!
ಇದಿಷ್ಟೂ ನಡೆದಿರುವುದು ಬೆಂಗಳೂರಿನ ಕೆಂಗೇರಿಯಲ್ಲಿ. ಶಿವಮೊಗ್ಗ ಮೂಲದ ಶಾಂತಜ್ಜಿ ವಿಪರೀತ ಮಡಿವಂತಿಕೆಯ ಹೆಂಗಸು. ಮಗಳು ರಾಧಾ, ಮೊಮ್ಮಗ ಸಂಜಯ್ ಜತೆ ಬೆಂಗಳೂರಿಗೆ ಸ್ಥಳಾಂತರಧಿಗೊಂಡು, ಕೆಂಗೇರಿಯ ಬಾಡಿಗೆ ಮನೆಧಿಯಲ್ಲಿಬದುಕು ಸಾಗಿಸುತ್ತಿದ್ದರು.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಏರೋನಾಟಿಕಲ್ ಎಂಜಿನಿಯರಿಂಗ್ ಕಲಿಯುತ್ತಿದ್ದ ಸಂಜಯನಿಧಿಗಾಗಿ ಸ್ವಂತ ಊರಿನಲ್ಲಿದ್ದ ಜಾಗ ಮಾರಾಟ ಮಾಡಿ ರಾಜಧಾನಿಗೆ ಬಂದಿದ್ದರು.
ಆದರೆ, ಅದೇಕೋ 65 ವರ್ಷದ ಶಾಂತಜ್ಜಿಗೆ ಬೆಂಗಳೂರು ಬದುಕು ಅಷ್ಟಾಗಿ ಆಗಿಬರಲಿಲ್ಲ. ಮನೆಗೆ ಸಂಜಯನನ್ನು ಹುಡುಕಿಕೊಂಡು ಗೆಳೆಯರು ಬರುತ್ತಿದ್ದರು.
ಆತ ಕೂಡ ತರಗತಿಗೆ ಟಾಪ್ ರ‍್ಯಾಂಕ್ ಪಡೆದ ಪ್ರತಿಭಾವಂತ. ಓದು ಮುಗಿದ ಕೂಡಲೇ ಕೆಲಸಕ್ಕೆ ಸೇರಿ ಸಂಪಾದಿಸಿ ತಾಯಿ, ಅಜ್ಜಿಯನ್ನು ಸಾಕಬೇಕು. ಸ್ವಂತ ಸೂರು ಕಟ್ಟಿಕೊಳ್ಳಬೇಕೆಂದು ಕನಸು ಕಂಡಿದ್ದ ಮಹತ್ವಾಕಾಂಕ್ಷಿ.
ಮಗಳು ರಾಧಾ ಕೂಡ ಸೋಶಿಯಲ್ ಹೆಣ್ಣುಮಗಳು. ಪರಿಚಯವಾದ ನೆರೆಹೊರೆಯರು ಮನೆಗೆ ಬಂದು ಹೋಗುತ್ತಿಧಿದ್ದರು. ಇದೆಲ್ಲವೂ ಶಾಂತಜ್ಜಿಗೆ ಅಸಹನೀಯವಾಗಿತ್ತು. ಯಾವ್ಯಾವ ಜಾತಿಯವರೋ ಹೊಸ್ತಿಲೊಳಗೆ ಬರುತ್ತಾರೆ.
ತಿನ್ನುಣ್ಣುವ ಸಂಜಯನ ಗೆಳೆಯರು ಅಡುಗೆ ಮನೆಗೆ ಬರುತ್ತಾರೆ ಎಂದು ಗೊಣಗುತ್ತಾ, ಮಗಳು-ಮೊಮ್ಮಗನ ಜತೆ ಪ್ರೀತಿಯ ಜಗಳವಾಡುತ್ತಾ, ದಿನಕ್ಕೆ ಐದಾರು ಬಾರಿ ಸ್ನಾನ ಮಾಡಿಕೊಂಡು, ಮಡಿಯಾಗುತ್ತಾ ಶಾಂತಜ್ಜಿ ಸಂಧ್ಯಾ ಬದುಕು ಸವೆಸುತ್ತಿದ್ದರು.
ಆದರೆ, ಇಂಥದ್ದೊಂದು ಮಡಿವಂತಿಕೆಯೇ ಮನೆಯ ಆ ಮೂವರ ಬದುಕಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ ಎಂದು ಯಾರೂ ಎಣಿಸಿರಲಿಲ್ಲ.
ಅದೊಂದು ದಿನ, 2016ರ ಆಗಸ್ಟ್ 16 ಆ ಮನೆಯವರ ಬದುಕಿನ ‘ಕರಾಳ’ ಅಧ್ಯಾಯಕ್ಕೆ ಮುನ್ನುಡಿ ಬರೆದು ಬಿಟ್ಟಿತು. ಹೊರಗಡೆ ತರಿಸಿದ್ದ ಊಟ ತಿನ್ನುವ ವಿಚಾರಕ್ಕೆ ಮೂವರ ನಡುವಣ ಜಗಳ ವಿಕೋಪಕ್ಕೆ ತಿರುಗಿತ್ತು.
ಇದರಿಂದ ಸಿಟ್ಟಿಗೆದ್ದ ರಾಧಾ, ”ಏನಮ್ಮ ನೀನು, ಇಷ್ಟೊಂದು ಮಡಿ-ಮೈಲಿಗೆ ಅಂದ್ರೆ ಹೇಗೆ?” ಎಂದು ಸನಿಹದಲ್ಲಿದ್ದ ಲಟ್ಟಣಿಗೆಯಿಂದ ಅಮ್ಮನ ತಲೆಗೆ ಬೀಸಿದರು !
ಮೊದಲೇ ಬಿಪಿ, ಶುಗರ್ ಮಟ್ಟ ಏರಿಸಿಕೊಂಡು ರೇಗಾಟಕ್ಕೆ ಇಳಿದಿದ್ದ ಶಾಂತಜ್ಜಿ, ನೋಡನೋಡುತ್ತಲೇ ಜೀವವನ್ನೇ ಕಳೆದುಕೊಂಡರು.
ತಾಂತ್ರಿಕವಾಗಿ ಕೊಲೆಯೊಂದು ನಡೆದೇ ಬಿಟ್ಟಿತು, ಮಡಿವಂತಿಕೆ ಬಲಿ ಪಡೆದುಕೊಂಡಿತು. ಕೋಪದ ಕೈಗೆ ಬುದ್ಧಿಕೊಟ್ಟು ಎಸಗಿದ್ದ ಕೃತ್ಯಕ್ಕೆ ತಾಯಿ, ಮಗ ಗಾಬರಿಯಾದರು. ಯಾರಿಗೆ ಹೇಳೋದು ಎಂದು ಗೊತ್ತಾಗದೇ ದಿಕ್ಕು ತೋಚದೆ ಕುಳಿತು ಬಿಟ್ಟರು.
ಮನೆಯಲ್ಲಿ ಶವ ಇಟ್ಟುಕೊಂಡೇ ಊಟ, ತಿಂಡಿ ಸೇವಿಸಿದರು. ಆದರೆ, ಎರಡು ದಿನ ಕಳೆಯುತ್ತಿದ್ದಂತೆ ಹೆಣದ ದುರ್ನಾತ ಮೂಗಿಗೆ ಬಡಿಯಲಾರಂಭಿಸಿತು.
ಕೂಡಲೇ ಐಡಿಯಾ ಹುಡುಕಿದ ಸಂಜಯ ಹೆಣದ ವಾಸನೆ ಬಾರದಂತೆ ತಡೆಯಲು ಏನು ಮಾಡಬೇಕೆಂದು ಗೂಗಲ್‌ನಲ್ಲಿ ಶೋಧಿಸಿ ಕೆಲ ಕೆಮಿಕಲ್‌ಗಳನ್ನು ಖರೀದಿಸಿ ತಂದು, ಅದನ್ನು ಮೃತದೇಹಕ್ಕೆ ಸಿಂಪಡಿಸಿದ. ನಾಲ್ಕು ದಿನ ಕಳೆಯಿತು, ಹೆಣದ ವಾಸನೆ ಜತೆ ಬದುಕುವುದು ಅಸಹನೀಯ ಎನಿಸಿತು.
ಹೊರಗಡೆ ಹೆಣ ತೆಗೆದುಕೊಂಡು ಹೋದರೆ ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಎಂದು ಆತಂಕದಲ್ಲಿದ್ದ ತಾಯಿ ಮಗನಿಗೆ ಗೋಡೆಯ ವಾರ್ಡ್ ರೋಬ್ ಕಣ್ಣಿಗೆ ಕಾಣಿಸಿಬಿಟ್ಟಿತು. ಥಟ್ಟನೆ ಅಜ್ಜಿಯ ಮೃತದೇಹ ಮಡಚಿದ ಸಂಜಯ, ಸೀದಾ ವಾರ್ಡ್‌ರೋಬ್‌ನಲ್ಲಿ ಇರಿಸಿದ್ದ.
ತನ್ನ ಸ್ನೇಹಿತ ಕುಂಬಳಗೋಡಿನ ನಂದೀಶ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಒಂದಿಷ್ಟು ದುಡ್ಡು ಕೈಗಿಟ್ಟು ಸಹಾಯ ಮಾಡುವಂತೆ ಕೋರಿದ.
ಮೂವರು ಸೇರಿ ಶಾಂತಧಿಕುಮಾರಿ ಶವವನ್ನು ವಾರ್ಡ್‌ರೋಬ್‌ನಲ್ಲಿಟ್ಟು ಅರ್ಧಂಬರ್ಧ ಸಿಮೆಂಟ್ ಹಾಕಿ ಪ್ಲಾಸ್ಟಿಂಗ್ ಮಾಡಿಬಿಟ್ಟರು. ಕಡು ಕೆಂಪು ಬಣ್ಣದ ಪೇಂಟ್ ತರಿಸಿದ್ದ ಸಂಜಯ, ಪೇಂಟ್ ಮಾಡಿ ಶವದ ಗುರುತು ಸ್ವಲ್ಪವೂ ಕಾಣದಂತೆ ಮಾಡಿಬಿಟ್ಟ.
ಅಲ್ಲಿಗೆ ಪಾಪ ಕಾರ್ಯವೊಂದು ಮುಕ್ತಾಯಕ್ಕೆ ಬಂದಿತು ಎಂದು ತಾಯಿ, ಮಗ ನಿಟ್ಟುಸಿರು ಬಿಟ್ಟಿದ್ದರು.
ದಿನಗಳು ಉರುಳಿದವು. ಅಕ್ಕಪಕ್ಕದ ಮನೆಯವರು ಅಜ್ಜಿ ಎಲ್ಲಿ ಎಂದು ಕೇಳಿದರೆ ಊರಿಗೆ ಹೋಗಿದ್ದಾರೆ ಎಂಬ ಸುಳ್ಳು ಸಿದ್ಧವಾಗಿರುತ್ತಿತ್ತು. ಸಂಜಯ್ ಕೂಡ ಪ್ರತಿನಿತ್ಯ ಕಾಲೇಜಿಗೆ ಹೋಗಿ ಬರುತ್ತಿದ್ದ.
ಹೀಗೆ ಆರು ತಿಂಗಳು ಕಳೆದವು. ವಾರ್ಡ್‌ರೋಬ್‌ನಲ್ಲಿದ್ದ ಶವ ಕೊಳೆತು ಕೆಟ್ಟ ವಾಸನೆ ಬರತೊಡಗಿತು.
ವಾಸನೆ ಬಂದಾಗಲೆಲ್ಲಾ ಗೂಗಲ್ ಸರ್ಚ್ ಮಾಡಿ ಕೆಮಿಕಲ್ ತರಿಸುತ್ತಿದ್ದ ಸಂಜಯ್ ಸಿಂಪಡಣೆ ಮಾಡುತ್ತಿದ್ದ. ಕೆಲ ದಿನಗಳವರೆಗೆ ಇದೇ ಮುಂದುವರಿದಿತ್ತು. ಹೀಗೆ ಆರು ತಿಂಗಳು ಕಳೆಯಿತು.
ಶವದ ವಾಸನೆ ವಿಪರೀತವಾಗಿ ಇಲ್ಲಿ ವಾಸ ಮಾಡುವುದು ಕಷ್ಟವೆಂದು ತಾಯಿ ಮಗ 2017ರ ಸೆ.2ರಂದು ಮನೆಗೆ ಬೀಗ ಹಾಕಿ, ಊರಿಗೆ ಹೋಗಿ ಬರುತ್ತೇವೆ ಎಂದು ಮನೆ ಮಾಲೀಕ ನವೀನ್ ಅವರಿಗೆ ಹೇಳಿ ಜಾಗ ಖಾಲಿ ಮಾಡಿದರು. 6 ವರ್ಷಗಳ ಬಳಿಕ ಕೆಂಗೇರಿ ಪೊಲೀಸರಿಗೆ ಸಿಕ್ಕಿಬಿದ್ದರು.
ಊರಿಗೆ ಹೋಗುತ್ತೇವೆ ಎಂದು ಹೇಳಿದವರು ಮೂರು ತಿಂಗಳು ಕಳೆದರೂ ವಾಪಸ್ ಬಂದಿರಲಿಲ್ಲ. ಅವರ ಎರಡೂ ಫೋನ್‌ಗಳು ಸ್ವಿಚ್ಡ್ ಆಫ್ ಆಗಿದ್ದವು.
ಇದರಿಂದ ಅನುಮಾನಗೊಂಡ ಮಾಲೀಕ, 2017ರ ಮೇ 5ರಂದು 3 ತಿಂಗಳಿನಿಂದ ಬೀಗ ಹಾಕಿದ್ದ ತಮ್ಮ ನೆಲಮಹಡಿಯ ಮನೆಯ ಬಾಗಿಲು ತೆರೆಸಿದ ಕೂಡಲೇ ತಡೆಯಲು ಅಸಾಧ್ಯವಾದ ಕೆಟ್ಟವಾಸನೆ ಮೂಗಿಗೆ ಬಡಿಯಲಾರಂಭಿಸಿತು.
ದುರ್ವಾಸನೆ ತಡೆದುಕೊಂಡೇ ಮನೆಯ ಹಾಲ್ ಗೋಡೆಯ ಕಡೆಗೆ ಕಣ್ಣು ಹಾಯಿಸಿದವರಿಗೆ ಒಮ್ಮೆಲೇ ದಿಗ್ಭ್ರಮೆ ಉಂಟಾಗಿತ್ತು. ವಾರ್ಡ್ ರೋಬ್‌ಗೆ ಮಾತ್ರ ಬಳಿದಿದ್ದ ಕಡು ಕೆಂಪು ಬಣ್ಣ ಎದೆಯಲ್ಲಿ ನಡುಕ ಹುಟ್ಟಿಸಿತು.
ಮನೆಯಲ್ಲಿ ಕಂಡ ಅನುಮಾನದ ವಾಸನೆ, ಬಣ್ಣ ಕಂಡು ಬೆವರಿದ ನವೀನ್, ಏದುಸಿರು ಬಿಡುತ್ತಾ ಕೆಂಗೇರಿ ಪೊಲೀಸ್ ಠಾಣೆಗೆ ದೌಡಾಯಿಸಿ ತಾನು ಕಂಡ ಸನ್ನಿವೇಶವನ್ನು ವಿವರಿಸಿದರು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ತಂಡ, ಕೆಂಪು ಬಣ್ಣ ಬಳಿದುಕೊಂಡು ಎದೆ ಝಲ್ ಎನಿಸುವಂತಿದ್ದ ವಾರ್ಡ್ ರೋಬ್‌ನ ಗೋಡೆ ಒಡೆದಾಗ ಬಹುತೇಕ ಕೊಳೆತಿದ್ದ ಅರ್ಧಂಬರ್ಧ ಅಸ್ಥಿಪಂಜರ ಕೆಳಗೆ ಬಿದ್ದಿತ್ತು.
ಈ ಭೀಕರ ದೃಶ್ಯ ನೋಡಿ ಅಲ್ಲಿದ್ದವರೂ ಬೆಚ್ಚಿಬಿದ್ದರು. ಅಸ್ಥಿಪಂಜರದ ಹಿನ್ನೆಲೆ ಕೆದಕಿದಾಗ ಆರು ವರ್ಷಗಳ ಹಿಂದೆ ನಡೆದಿದ್ದ ಶಾಂತಕುಮಾರಿ ಅಜ್ಜಿ ಹತ್ಯೆಯ ಸತ್ಯ ಬಯಲಾಯಿತು.