ಅಗ್ನಿಪಥ್ ವಿರೋಧಿ ಪ್ರತಿಭಟನೆ: ಗುವಾಹಟಿ ಎಕ್ಸ್ಪ್ರೆಸ್ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಭಾರತೀಯ ಸೇನೆಯಲ್ಲಿ ಹೊಸ ನೇಮಕಾತಿ ಯೋಜನೆ ಅಂದರೆ ಅಗ್ನಿಪಥ್ ಯೋಜನೆ ವಿರೋಧಿಸಿ ಕಳೆದ ಕೆಲ ದಿನಗಳಿಂದ ಪ್ರತಿಭಟಬೆಗಳು ನಡೆಯುತ್ತಿದೆ.
ಇಂದು ಬಿಹಾರದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಜಮ್ಮು ತಾವಿ ಗುವಾಹಟಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಬೆಂಕಿ ಅವಘಡದಲ್ಲಿ ರೈಲಿನ ಎರಡು ಬೋಗಿಗಳು ಸುಟ್ಟು ಕರಕಲಾಗಿವೆ.ಅಗ್ನಿಪಥ ಯೋಜನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಾಜಿಪುರ ಬರೌನಿ ರೈಲ್ವೆ ವಿಭಾಗದ ಮೊಹಿಯುದ್ದೀನ್ನಗರ ನಿಲ್ದಾಣದಲ್ಲಿ ಇಂದು ರೈಲಿನ ಕೆಲ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ.ಸತತ ಮೂರನೇ ದಿನವಾದ ಇಂದು ಹಲವು ಜಿಲ್ಲೆಗಳಲ್ಲಿ ಕೋಲಾಹಲ, ಗದ್ದಲ ಎದ್ದಿವೆ.
ಈ ಹಿಂದೆ ರೈಲುಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಘಟನೆಗಳು ನಡೆದಿತ್ತು. ಇದೇ ವೇಳೆ ರೈಲನ್ನು ನಿಲ್ಲಿಸುವ ಮೂಲಕ ಸರ್ಕಾರದ ನೂತನ ಸೇನಾ ನೇಮಕಾತಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮಸ್ತಿಪುರದಲ್ಲಿಯೂ ವಿದ್ಯಾರ್ಥಿಗಳು ಸೇನೆಯ ಪುನಶ್ಚೇತನಕ್ಕೆ ಕೇಂದ್ರ ತಂದಿರುವ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ದಲ್ಸಿಂಗ್ಸರಾಯ್ ರೈಲು ನಿಲ್ದಾಣದಲ್ಲಿ ಅವಧ್ ಅಸ್ಸಾಂ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗಿದೆ.
ಈ ಎಲ್ಲಾ ಆಂದೋಲನದ ವಿದ್ಯಾರ್ಥಿಗಳು ಸರ್ಕಾರದ ಹೊಸ ಸೇನಾ ನೇಮಕಾತಿ ನೀತಿಯನ್ನು ಅಂದರೆ ಅಗ್ನಿಪಥ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಸಮಸ್ತಿಪುರದಲ್ಲಿ ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ಯುವಕರು ಗುರುವಾರ ಮೊರ್ವಾ ಬ್ಲಾಕ್ನ ಹಲೈನಲ್ಲಿರುವ ಸ್ಥಳೀಯ ಸಂಸದ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರ ನಿವಾಸದ ಬಳಿ ರಸ್ತೆ ತಡೆದು ಪ್ರತಿಭಟಿಸಿದರು.