ಅಗ್ನಿಪಥ್ ಪೂರಕ ಸೇನಾ ಸೇರ್ಪಡೆ ತರಬೇತಿಗೆ ಮುಗಿಬಿದ್ದ ಯುವಪಡೆ; ರಾಜ್ಯಾದ್ಯಂತ 754ಕ್ಕೂ ಅಧಿಕ ಅರ್ಜಿ!

ಮಂಗಳೂರು: ಕೇಂದ್ರದ ಅಗ್ನಿಪಥ್ ಯೋಜನೆಗೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ದೇಶದ ಸೇನೆಗೆ ಸೇರುವವರಿಗೆ ಸೂಕ್ತ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ರಾಜ್ಯಾದ್ಯಂತ 754ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ.
ಸೇನಾ ಪೂರ್ವ ತರಬೇತಿಗಾಗಿ ಸಮಾಜ ಕಲ್ಯಾಣ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ, ಉಡುಪಿ ಜಿಲ್ಲೆಯಲ್ಲಿ ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ, ಕಾರವಾರದಲ್ಲಿ ವೀರಬಹದ್ದೂರ್ ಹೇಂಜ ನಾಯ್ಕ್ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಆರಂಭಿಸಲು ನಿರ್ಧರಿಸಿದೆ.
ಇದಕ್ಕೆ ಮಂಗಳೂರಿನ ಕದ್ರಿಯ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ, ಉಡುಪಿಯ ಕೋಟೇಶ್ವರ ಐಟಿಐ ಕಾಲೇಜಿನಲ್ಲಿ, ಉತ್ತರ ಕರ್ನಾಟಕದ ಕಾರವಾರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ಧಲಿಂಗೇಶ್ ಬೇವಿನಮಟ್ಟಿ ತಿಳಿಸಿದ್ದಾರೆ.
ಆ.16 ಅರ್ಜಿ ಸಲ್ಲಿಕೆಗೆ ಕೊನೆಸೇನೆಗೆ ಸೇರ ಬಯಸುವ ರಾಜ್ಯದ 17-22 ವರ್ಷದ ಯುವಕರು ಈ ತರಬೇತಿ ಅರ್ಜಿ ಸಲ್ಲಿಸಬಹುದಾಗಿದ್ದು, ಆ.16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೇ ದಿನ. ಅಭ್ಯರ್ಥಿಗಳ ಅಂತಿಮ ಆಯ್ಕೆಗಾಗಿ ಈಗಾಗಲೇ ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ತರಬೇತುದಾರರ ಅರ್ಜಿಯನ್ನು ಅಂತಿಮಗೊಳಿಸಲಿದೆ.
375 ಸೀಟಿಗೆ 754 ಅರ್ಜಿಮೂರು ತರಬೇತಿ ಶಾಲೆಯಲ್ಲಿ ಪಟ್ಟು 375 ಸೀಟು (ತಲಾ 125) ಮೀಸಲಿರಿಸಲಾಗಿದ್ದು (ಒಬಿಸಿ 100 ಮತ್ತು ಎಸ್‌ಸಿ/ಎಸ್ಟಿ 25) ಇದಕ್ಕೆ ರಾಜ್ಯದ ನಾನಾ ಕಡೆಯಿಂದ 754 ಅರ್ಜಿಗಳು ಬಂದಿದೆ.
ನಾಲ್ಕು ತಿಂಗಳ ತರಬೇತಿ ಇದಾಗಿದ್ದು, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ಮಂದಿ, ಉಡುಪಿ ಜಿಲ್ಲೆಯಲ್ಲಿ 108 ಮಂದಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 580 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿ ಬಳಿಕ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಇದು ಅಗ್ನಿಪಥ್ ಸೇನಾ ಸೇರ್ಪಡೆಗೆ ಸಹಕಾರಿಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದೈಹಿಕ ಸಾಮರ್ಥ್ಯ ಪರೀಕ್ಷೆಸೇನಾ ತರಬೇತಿಗೂ ಅಭ್ಯರ್ಥಿಗಳ ಆಯ್ಕೆಯನ್ನು ದೈಹಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನದ ಮೇಲೆ ನಡೆಯಲಿದೆ. 4 ತಿಂಗಳ ತರಬೇತಿಯಲ್ಲಿ ನಿವೃತ್ತ ಯೋಧರಿಕೆ ದೈಹಿಕ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ನುರಿತ ಕಾಲೇಜು ಶಿಕ್ಷಕರಿಂದ ಥಿಯರಿ ತರಗತಿಗಳು ನಡೆಯಲಿದೆ ಎಂದು ಉತ್ತರ ಕನ್ನಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್ ತಿಳಿಸಿದ್ದಾರೆ.
ಕೇಂದ್ರದ ಅಗ್ನಿಪಥ್ ಯೋಜನೆಗೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸೇನೆ ಸೇರುವವರಿಗೆ ದಕ್ಷಿಣ ಕನ್ನಡ, ಉಡುಪಿ, ಕಾರವಾರದಲ್ಲಿ ವಿಶೇಷ ತರಬೇತಿ ಶಾಲೆ ತೆರೆಯಲು ಉದ್ದೇಶಿಸಲಾಗಿದ್ದು, ರಾಜ್ಯಾದ್ಯಂತ 700ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಊಟ, ವಸತಿ ಸಂಪೂರ್ಣ ಉಚಿತವಾಗಿದೆ.ಕೋಟಾ ಶ್ರೀನಿವಾಸ ಪೂಜಾರಿ, ಸಚಿವರು, ಸಮಾಜ ಕಲ್ಯಾಣ ಇಲಾಖೆ.