
ಅಕ್ರಮ ಸಂಬಂಧದಿಂದ ಜನಿಸಿದ ಮಗು ಪರಿಹಾರ ಪಡೆಯಲು ಅರ್ಹ ಎಂದು ಹೈಕೋರ್ಟ್ ಪ್ರಕರಣವೊಂದರ ವಿಚಾರಣೆಯಲ್ಲಿ ಮಹತ್ತರ ಆದೇಶ ನೀಡಿದೆ.
ಬೆಂಗಳೂರಿನ ನಿವಾಸಿ ಮಲ್ಲಿಕಾರ್ಜುನ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರ ವಿಚಾರವಾಗಿ ಮೃತನ ಪೋಷಕರು, ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಅಪ್ರಾಪ್ತ ವಯಸ್ಕ ಪುತ್ರ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕ ಪುತ್ರನಿಗೆ ಪರಿಹಾರ ನೀಡಲು ನಿರಾಕರಿಸಿದ ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಆತ ಪರಿಹಾರ ಪಡೆಯಲು ಅರ್ಹನಾಗಿದ್ದಾನೆ ಎಂದು ಆದೇಶಿಸಿದೆ. ಮೃತ ಮಲ್ಲಿಕಾರ್ಜುನ ಅವರ ಪೋಷಕರಿಗೆ ಘೋಷಿಸಿದ್ದ 9.86 ಲಕ್ಷ ಪರಿಹಾರವನ್ನು 13,28,940 ರೂ.ಗೆ ಹೆಚ್ಚಿಸಿದೆ.
ಮೃತನ ಪೋಷಕರಿಗೆ ತಲಾ ಶೇ.30ಮತ್ತು ಅಪ್ರಾಪ್ತ ವಯಸ್ಕ ಪುತ್ರಗೆ ಶೇ.40ಪರಿಹಾರ (ದಾವೆ ಆರಂಭವಾದಾಗಿಂದ ಪರಿಹಾರ ಮೊತ್ತ ಪಾವತಿಸುವ ದಿನದವರೆಗೆ ಶೇ.6ರಷ್ಟು ಬಡ್ಡಿ ದರದೊಂದಿಗೆ ) ನೀಡಬೇಕು ಎಂದು ವಿಮಾ ಕಂಪನಿಗೆ ನಿರ್ದೇಶಿಸಿದೆ.
ಮೃತನ ಪೋಷಕರು ವೃದ್ಧರಾಗಿರುವುದರಿಂದ ಅವರ ಭಾಗದ ಶೇ.60ಪರಿಹಾರ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮಗನ ಭಾಗದ ಹಣವನ್ನು ನಿಶ್ಚಿತ ಠೇವಣಿ ಇಡಬೇಕು.
ಮಗನ ಶೈಕ್ಷಣಿಕ ವೆಚ್ಚವನ್ನು ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಾಯಿ ಪಡೆದುಕೊಳ್ಳಬೇಕು. ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಕ್ಲೇಮುದಾರರಿಗೆ ಆರು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.