ಬೆಂಗಳೂರುರಾಜಕೀಯರಾಜ್ಯ

ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ರಿಲೀಫ್

ಹೊಸದಿಲ್ಲಿ: ಸಕ್ರಿಯ ರಾಜಕೀಯ ಜೀವನದಿಂದ ದೂರ ಸರಿಯುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ನೀಡಿದ ಸಂದರ್ಭದಲ್ಲಿಯೇ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಅವರಿಗೆ ಶುಕ್ರವಾರ ದೊಡ್ಡ ನಿರಾಳತೆ ಸಿಕ್ಕಿದೆ.
ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿನ ಕ್ರಿಮಿನಲ್ ವಿಚಾರಣೆಗೆ ತಡೆ ನೀಡುವಂತೆ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಸರಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು.

ಹಿರಿಯ ಬಿಜೆಪಿ ನಾಯಕರಾಗಿರುವ ಯಡಿಯೂರಪ್ಪ ಅವರು 2006-07ರ ಅವಧಿಯಲ್ಲಿ ಅಕ್ರಮವಾಗಿ ಭೂಮಿಯ ಡಿನೋಟಿಫಿಕೇಷನ್ ಮಾಡಿದ್ದಾಗಿ ಪ್ರಕರಣ ದಾಖಲಾಗಿತ್ತು. ಉದ್ಯಮಿಗಳಿಗೆ ಭೂಮಿ ಹಂಚಿಕೆ ಮಾಡುವಾಗ ಹಲವಾರು ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಎಂಬ ಯಡಿಯೂರಪ್ಪ ಅವರ ಮನವಿಯನ್ನು ಕರ್ನಾಟಕ ಹೈಕೋರ್ಟ್ 2020ರಲ್ಲಿ ನಿರಾಕರಿಸಿತ್ತು. ತನಿಖೆಯನ್ನು ವಿಳಂಬಗೊಳಿಸುತ್ತಿರುವುದಕ್ಕೆ ಪೊಲೀಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ತರಾಟೆಗೆ ತೆಗೆದುಕೊಂಡಿದ್ದರು. ತನಿಖೆಯನ್ನು ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಪ್ರದೇಶಗಳಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಭೂಮಿ ಮಂಜೂರು ಮಾಡಲು ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು ಎಂದು ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ವಾಸುದೇವ ರೆಡ್ಡಿ ಎಂಬುವವರು ಖಾಸಗಿ ದೂರು ದಾಖಲಿಸಿದ ಬಳಿಕ 2013ರಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ತಮ್ಮ ಬದಲಾಗಿ ತಮ್ಮ ಮಗ ವಿಜಯೇಂದ್ರ ಸ್ಪರ್ಧೆ‌ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಸುಪ್ರೀಂಕೋರ್ಟ್‌ನ ಈ ನಿರ್ಧಾರ ಹೊರಬಿದ್ದಿದೆ.

“ನಾನು ನನ್ನ ಕ್ಷೇತ್ರವನ್ನು ಬಿಟ್ಟು ಕೊಡುತ್ತಿರುವ ಕಾರಣ ಮುಂದಿನ ಚುನಾವಣೆಯಲ್ಲಿ ನನ್ನ ಮಗ ಬಿ. ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಶಿಕಾರಿಪುರ ಜನತೆ ಬೆಂಬಲ ನೀಡಬೇಕು. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಇಲ್ಲಿ ನನ್ನ ಸ್ಥಾನ ತೆರವಾಗುವುದರಿಂದ ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button