ರಾಜ್ಯ

ಅಕ್ಕಿ, ರಾಗಿ, ಗೋಧಿ ಸೇರಿ ಎಲ್ಲಾ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ: ಗಿರಣಿ ಮಾಲೀಕರ ಆಕ್ರೋಶ

ಇದೇ ಜುಲೈ 18 ರಿಂದ ದೇಶಾದ್ಯಂತ ಅಕ್ಕಿ, ರಾಗಿ, ಜೋಳ, ಗೋಧಿ ಸೇರಿ ಎಲ್ಲಾ ಆಹಾರ ಧಾನ್ಯಗಳ ಮೇಲೆ ಶೇ.5 ರಷ್ಟು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ವಿಧಿಸಲು ಮುಂದಾಗಿರುವ ಕೇಂದ್ರ ಸರಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಜಿಲ್ಲಾ ಅಕ್ಕಿ ಗಿರಣಿದಾರರ ಸಂಘ ಹಾಗೂ ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ ಆಗ್ರಹಿಸಿದೆ.

ದಾವಣಗೆರೆ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಕಿ ಗಿರಣಿದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ, ಒಂದೊಮ್ಮೆ ಅಕ್ಕಿ ಮೇಲೆ ಶೇ.5 ಜಿಎಸ್‌ಟಿ ವಿಧಿಸಿದರೆ ಅದನ್ನು ಖರೀದಿಸುವ ಕಟ್ಟಕಡೆಯ ಗ್ರಾಹಕರಿಗೆ ದರ ಏರಿಕೆ ಬರೆ ಬೀಳಲಿದೆ. ಹಾಗೇ, ಭತ್ತ ಬೆಳೆಯುವ ರೈತರು ನ್ಯಾಯಯುತ ಬೆಲೆಯಿಂದ ವಂಚಿತರಾಗಲಿದ್ದಾರೆ ಎಂದರು.

ಜನ ಸಾಮಾನ್ಯರ ಕಾಳಜಿ ದೃಷ್ಟಿಯಿಂದ ಕಳೆದ ಹಲವು ದಶಕಗಳಿಂದ ಆಹಾರ ಧಾನ್ಯಗಳ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸಿರಲಿಲ್ಲ. ಜಿಎಸ್‌ಟಿ ಜಾರಿಯಾದ ನಂತರ ಬ್ರಾಂಡೆಡ್‌ ಧಾನ್ಯಗಳಿಗಷ್ಟೇ ತೆರಿಗೆ ವಿಧಿಸಲಾಗಿತ್ತು. ಆದರೆ ಜೂನ್ 28 ಮತ್ತು 29 ರಂದು ಚಂಡೀಗಡದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 47ನೇ ಸಭೆಯಲ್ಲಿ ಬ್ಯಾಂಡೆಡ್‌ ಹೊರತು ಪಡಿಸಿ ಲೇಬಲ್‌ ಸೇರಿ ಒಟ್ಟಾರೆ ಎಲ್ಲಾ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಇದೊಂದು ಜನ ಸಾಮಾನ್ಯರ ವಿರೋಧಿ ನಿಲುವಾಗಿದ್ದು, ಸಂಘ ಇದನ್ನು ವಿರೋಧಿಸುತ್ತದೆ ಎಂದು ತಿಳಿಸಿದರು.

ದಾವಣಗೆರೆಯ ಶ್ಯಾವಿಗೆ ದೇಶ ವಿದೇಶದಲ್ಲೂ ಫೇಮಸ್‌: ಲಾಕ್‌ಡೌನ್‌ನಲ್ಲೂ ಕೈ ಬಿಡದ ಗುಡಿ ಕೈಗಾರಿಕೆಬೆಲೆ ಕುಸಿತದ ಅಪಾಯ: ಅಕ್ಕಿ ಮೇಲೆ ಜಿಎಸ್‌ಟಿ ಹಾಗೂ ಮಿಲ್‌ ಯಂತ್ರೋಪಕರಣ, ಬಿಡಿ ಭಾಗಗಳ ಮೇಲಿನ ಜಿಎಸ್‌ಟಿ ಶೇ. 18ಕ್ಕೆ ಹೆಚ್ಚಿಸಿರುವುದರ ನೇರ ಪರಿಣಾಮ ಅಕ್ಕಿ ಖರೀದಿಸುವ ಗ್ರಾಹಕರು ಹಾಗೂ ಭತ್ತ ಬೆಳೆಗಾರರ ಮೇಲೆ ಆಗಲಿದೆ. ಉತ್ಪಾದನಾ ವೆಚ್ಚ ಹೆಚ್ಚುವ ಕಾರಣ, ಮಿಲ್‌ನವರು ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸುತ್ತಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗಿ, ಭತ್ತ ಬೆಳೆಯಿಂದ ವಿಮುಖರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ ಕಾರ್ಯದರ್ಶಿ ಶಂಭುಲಿಂಗಪ್ಪ ಹೇಳಿದರು.

ಗೋಷ್ಠಿಯಲ್ಲಿ ರಾಜಗೋಪಾಲ ರೆಡ್ಡಿ, ಅನಿಲ್‌ ಕುಮಾರ್‌, ಚಂದ್ರಣ್ಣ, ಬದ್ರಿನಾಥ್‌, ದಾಗಿನಕಟ್ಟೆ ನಾಗರಾಜಪ್ಪ, ಕೆ. ಜಾವೀದ್‌ ಇತರರಿದ್ದರು.

ಅಕ್ಕಿ ಬೆಲೆ ಏರಿಕೆ ಎಷ್ಟು?ಅಕ್ಕಿ ಮೇಲೆ ಶೇ.5 ಜಿಎಸ್‌ಟಿ ವಿಧಿಸಿದರೆ ಒಂದು ಕೆಜಿ ಅಕ್ಕಿ ಬೆಲೆ 3 ರಿಂದ 4 ರೂ. ಹಾಗೂ ಒಂದು ಕ್ವಿಂಟಾಲ್‌ ಅಕ್ಕಿ ಬೆಲೆ 300 ರೂ.ಗಳಿಂದ 400 ರೂ. ಹೆಚ್ಚಾಗಲಿದೆ. ಈಗಾಗಲೇ ದಿನಸಿ ಸಾಮಗ್ರಿ, ಅಡುಗೆ ಅನಿಲ, ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಸಮಯದಲ್ಲಿ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿದರೆ ಸಾರ್ವಜನಿಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎಂದು ಬಕ್ಕೇಶಪ್ಪ ಅಭಿಪ್ರಾಯಪಟ್ಟರು.

ಮಿಲ್‌ ನಡೆಸುವುದೇ ಕಷ್ಟಭತ್ತ ಬೆಳೆ ಕೊರತೆ, ದುಬಾರಿ ವಿದ್ಯುತ್‌ ಬಿಲ್‌, ಕಾರ್ಮಿಕರ ಸಮಸ್ಯೆ ಹಾಗೂ ಹಲವು ಕಾನೂನಾತ್ಮಕ ತೊಂದರೆಗಳ ನಡುವೆ ಮಿಲ್‌ಗಳನ್ನು ನಡೆಸುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಆಹಾರ ಧಾನ್ಯದ ಸಂಸ್ಕರಣೆ ಪ್ರಕ್ರಿಯೆಗೆ ಸೇವಾ ಶುಲ್ಕದ ರೂಪದಲ್ಲಿ ಶೇ.5 ತೆರಿಗೆ ಕೊಡುತ್ತಿದ್ದಾರೆ. ಈಗ ಉತ್ಪಾದಿಸಿದ ಅಕ್ಕಿಗೆ ಶೇ.5 ಜಿಎಸ್‌ಟಿ ನಿಗದಿ ಪಡಿಸಿರುವುದು ಅವೈಜ್ಞಾನಿಕ. ಇದರೊಂದಿಗೆ ಕೃಷಿ ಕೈಗಾರಿಕಾ ಯಂತ್ರೋಪಕರಣಗಳ ಮೇಲೆ ಇದ್ದ ಶೇ.5 ಜಿಎಸ್‌ಟಿಯನ್ನು ಶೇ.18ಕ್ಕೆ ಹೆಚ್ಚಿಸುವ ಮೂಲಕ ಮಿಲ್‌ ಮಾಲಿಕರ ಮೇಲೆ ಗಧಾ ಪ್ರಹಾರ ಮಾಡಲಾಗಿದೆ. ಇದರಿಂದ ಕೃಷಿ ಆಧಾರಿತ ಕೈಗಾರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಚೇಂಬರ್‌ ಆಫ್‌ ಕಾಮರ್ಸ್‌ ಜಿಲ್ಲಾ ಕಾರ್ಯದರ್ಶಿ ಶಂಭುಲಿಂಗಪ್ಪ ಹೇಳಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button