ಅಂಬಿ ಪುಣ್ಯಸ್ಮರಣೆ: ಸುಮಲತಾ ಬರೆದ ಭಾವುಕ ಸಾಲುಗಳು

ಕಲ್ಲು ಹೃದಯದಲ್ಲೂ ಕವಿತೆ ಅರಳಿಸಬಲ್ಲ ಶಕ್ತಿ ಇರುವುದು ಪ್ರೇಮವೊಂದಕ್ಕೆ. ಮೊದಲೇ ಮೃದು ಹೃದಯಿಯಾಗಿರುವ ಸಂಸದೆ, ನಟಿ ಸುಮಲತಾ ಈಗ ಕವಯತ್ರಿಯಾಗಿದ್ದಾರೆ. ಪತಿ ಅಂಬರೀಶ್ ನೆನಪನ್ನು ಅಕ್ಷರಗಳಲ್ಲಿ ಹಿಡಿದಿಡುವ ಯತ್ನ ಮಾಡಿದ್ದಾರೆ.
ಇಂದು ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ, ಮೂರು ವರ್ಷದ ಹಿಂದೆ ಅಂಬರೀಶ್ ಇದೇ ದಿನ ಎಲ್ಲರನ್ನೂ ದೈಹಿಕವಾಗಿ ಅಗಲಿದ್ದರು.
ಆದರೆ ಅಭಿಮಾನಿಗಳ ಮನದಲ್ಲಿ, ಆತ್ಮೀಯರ, ಕುಟುಂಬ ವರ್ಗದವರ ನೆನಪಲ್ಲಿ ಸದಾ ಅಂಬಿ ಸದಾ ಚಿರಸ್ಥಾಯಿ.
ಅಂಬರೀಶ್ ಅವರ ಪುಣ್ಯ ಸ್ಮರಣೆಯ ದಿನ ಸುಮಲತಾ ಅವರು ಅಂಬಿಗಾಗಿ ಕೆಲವು ಭಾವುಕ ಸಾಲುಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಮಲತಾ ಅವರು ಬರೆದಿರುವ ಸಾಲುಗಳು ಯಥಾವತ್ತು ಇಲ್ಲಿದೆ,
”ದಿನ ಕಳೆದಂತೆ ವರ್ಷಗಳು ಉರುಳಿದಂತೆ…
ಜೀವನ ಪಯಣವಂತೆ
ಸವೆದರು ಸವೆಯದಂತೆ
ಅದು ಕರಗುವ ಮುನ್ನ,
ತುಸು ನಗು ಮತ್ತು ನೋವು ನಮ್ಮ ಪಾಲು
ಒಂದೊಮ್ಮೆ ಹೃದಯದ ಬಡಿತ
ನಿಂತಾದರು,
ನೊಂದರು, ಬೆಂದರು, ಎಲ್ಲವನ್ನೂ
ನನ್ನ ನಗುವ ಮುಖವಾಡದಿಂದ
ಎದೆಯ ಒಳಗೆ ಬಚ್ಚಿ ಸಾಗುತ್ತಾ ನಡೆದಂತೆ ಜೀವನ
ಕೆಲವೊಮ್ಮೆ ನನ್ನ ಹೃದಯದ ಮಾತು ತಿಳಿಸಲು
ನಿಮ್ಮನ್ನು ಎಲ್ಲಡೆ ಹುಡುಕುವೆ
ನೀವು ಮರೆಯಾದಿರಿ ಯಾಕೆ?
ನನ್ನ ಮಾತು ಕೇಳದೆ
ಇನ್ನೊಮ್ಮೆ ನಿಮ್ಮ ನೆನಪು
ನನ್ನೆಲ್ಲ ನೋವು ಮರೆಸಿ ನಗುವ ಅಲೆಯಲ್ಲಿ
ತೇಲುವೆ
ಮತ್ತೊಮ್ಮೆ ಕಣ್ಣು ಮುಚ್ಚಿದಾಗೆಲ್ಲ
ನಿಮ್ಮನ್ನೆ ಎಲ್ಲೆಡೆ ಕಾಣುವೆ
ಹಾಗೊಮ್ಮೆ ನೀವಿಲ್ಲದೆ ಪಯಣ ಸಾಗದು
ನೀವಿದ್ದಿದ್ದರೆ ಎಂದು ನನ್ನ ಮನವು ತುಡಿವುದು
ನನ್ನೊಂದಿಗೆ, ನಮ್ಮೊಂದಿಗೆ ನೀವಿದ್ದ ಕ್ಷಣ ನೆನದು
ಮತ್ತೆ ನನ್ನ ಪಯಣ ಸಾಗುವುದು”
ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ನಡುವಿನ ಪ್ರೇಮಕ್ಕೆ ಸಾಕ್ಷಿಯಾಗಿವೆ ಈ ಸಾಲುಗಳು. ಪ್ರೀತಿಯ ಪತಿಯ ಅಗಲಿಕೆಯ ನೋವಿನಲ್ಲೇ ಸುಮಲತಾ ಪ್ರತಿ ದಿನದ ಪಯಣ ಮಾಡುತ್ತಿದ್ದಾರೆ.