ʼವಿಶ್ವಾಸʼ ಗೆದ್ದ ಏಕನಾಥ್ ಶಿಂಧೆ: 164 ಶಾಸಕರ ಬೆಂಬಲ ಪಡೆದ ನೂತನ ಸಿಎಂ

ವಿಶ್ವಾಸ ಮತಯಾಚನೆಯಲ್ಲಿ ಏಕನಾಥ್ ಶಿಂಧೆ ಸರ್ಕಾರವು ಬಹುಮತ ಪಡೆದುಕೊಂಡಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಶಿಂಧೆ ಬಣ ಇದೀಗ 164 ಶಾಸಕರ ಬೆಂಬಲದೊಂದಿಗೆ ಅಧಿಕಾರ ಭದ್ರಗೊಳಿಸಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 145 ಆಗಿತ್ತು. ಅಂದರೆ ಶಿಂಧೆ ಸರ್ಕಾರಕ್ಕೆ 145 ಶಾಸಕರ ಬೆಂಬಲ ಬೇಕಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಶಾಸಕರ ಬೆಂಬಲವನ್ನು ಪಡೆದುಕೊಂಡು ಗೆಲುವಿನ ನಗೆ ಬೀರಿದ್ದಾರೆ. ಏಕನಾಥ್ ಶಿಂಧೆ ಅವರ ಪರವಾಗಿ 164 ಮತಗಳು ಬಿದ್ದಿದ್ದು, ಪ್ರತಿಪಕ್ಷಗಳು ಕೇವಲ 99 ಮತಗಳನ್ನು ಪಡೆದಿವೆ.
ಶಿಂಧೆ ಸರ್ಕಾರ 164 ಮತಗಳಿಂದ ಬಹುಮತ ಸಾಬೀತುಪಡಿಸಿದೆ. ಇಂದು ಇನ್ನೂ ಇಬ್ಬರು ಶಾಸಕರು ಶಿಂಧೆ ಬೆಂಬಲಕ್ಕೆ ಬಂದಿದ್ದು, ಇವರಲ್ಲಿ ಶ್ಯಾಮಸುಂದರ್ ಶಿಂಧೆ ಮತ್ತು ಸಂತೋಷ್ ಬಂಗಾರ್ ಹೆಸರು ಸೇರಿವೆ. ಮತ್ತೊಂದೆಡೆ, ಮಹಾ ವಿಕಾಸ್ ಅಘಾಡಿಯ ಇಬ್ಬರು ಸಚಿವರಾದ ಅಶೋಕ್ ಚವ್ಹಾಣ್ ಮತ್ತು ವಿಜಯ್ ವಡೆತ್ತಿವಾರ್ ಅವರು ಸಮಯಕ್ಕೆ ಸರಿಯಾಗಿ ವಿಧಾನಸಭೆಗೆ ಬಾರದ ಕಾರಣ ಮತದಾನ ಮಾಡಲು ಸಾಧ್ಯವಾಗಲಿಲ್ಲ. 31 ತಿಂಗಳ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ ಶಿಂಧೆ ನೇತೃತ್ವದ ಸರ್ಕಾರ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದೆ. ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ಶಿಂಧೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸಿದೆ.
ಭಾನುವಾರ ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಮೊದಲ ಬಾರಿಗೆ ಸದನದ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇವರು ಒಟ್ಟಾರೆ 164 ಮತಗಳನ್ನು ಪಡೆದರೆ, ಎಂವಿಎ ಅಭ್ಯರ್ಥಿ ರಾಜನ್ ಸಾಲ್ವಿ ಕೇವಲ 107 ಮತಗಳನ್ನು ಪಡೆದಿದ್ದರು.
ಇನ್ನು ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಇನ್ನು ಕಳೆದ ದಿನ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಭಾನುವಾರ ರಾತ್ರಿ ಶಿವಸೇನಾ ಶಾಸಕ ಅಜಯ್ ಚೌಧರಿ ಅವರನ್ನು ಪಕ್ಷದ ಶಾಸಕಾಂಗ ನಾಯಕ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅಸೆಂಬ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಕಚೇರಿಯಿಂದ ಹೊರಡಿಸಲಾದ ಪತ್ರದಲ್ಲಿ, ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮತ್ತು ಶಿಂಧೆ ಪಾಳೆಯದ ಭರತ್ ಗೊಗವಾಲೆ ಅವರನ್ನು ಶಿವಸೇನೆಯ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.