ʼಮಹಾ ರಾಜಕೀಯ ತಿರುವುʼ: ಮುಂಬೈನಲ್ಲಿ ಜುಲೈ 10ರವರೆಗೆ 144 ಸೆಕ್ಷನ್ ಜಾರಿ!

ಮಹಾರಾಷ್ಟ್ರ ರಾಜಕೀಯ ದಿನೇ ದಿನೇ ತಾರಕಕ್ಕೇರುತ್ತಿದ್ದು, ಇದರ ಪರಿಣಾಮವಾಗಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಮುಂಬೈ ಪೊಲೀಸರು ಜುಲೈ 10ರವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನೊಂದೆಡೆ ಮೂಲಗಳ ಪ್ರಕಾರ ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆ ಶತಪ್ರಯತ್ನ ನಡೆಸುತ್ತಿದೆ. ಜೊತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಸಹ ಶಾಸಕರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ.
ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಿ, ಅವರ ಮೂಲಕ ಮನವೊಲಿಸುವ ಪ್ರಯತ್ನವನ್ನು ರಶ್ಮಿಯವರು ಮಾಡುತ್ತಿದ್ದಾರೆ ಎನ್ನಲಾಗಿದೆ.ಕಳೆದ ಶುಕ್ರವಾರ ಶಿವಸೇನೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಮತ್ತು ಬೆಂಬಲಿಗ ಶಾಸಕರು ಗುವಾಹಟಿಗೆ ತೆರಳಿದ್ದರು.
ಆ ಬಳಿಕ ಏಕನಾಥ್ ಶಿಂಧೆ ಮುಂಬೈಗೆ ಆಗಮಿಸಿ ಉಪಸಭಾಪತಿಯನ್ನು ಭೇಟಿಯಾಗುತ್ತಾರೆ ಎಂಬ ಮಾಹಿತಿಯೂ ಇತ್ತು. ಇನ್ನು ಏಕನಾಥ ಶಿಂಧೆ ಜೊತೆಗೆ 40 ಮಂದಿ ಶಾಸಕರಿದ್ದು, ಆ ಪೈಕಿ 34 ಮಂದಿ ಶಿವಸೇನೆ ಮತ್ತು 6 ಮಂದಿ ಪಕ್ಷೇತರರು ಎಂದು ಹೇಳಲಾಗುತ್ತಿದೆ.ಜೊತೆಗೆ ಉದ್ಧವ್ ಠಾಕ್ರೆಗೆ ಶಾಕ್ ನೀಡಲು ಏಕನಾಥ್ ಶಿಂಧೆ ಬಣ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಶಿಂಧೆ ಬೆಂಬಲಿಗರು ತಮ್ಮ ಪ್ರತ್ಯೇಕ ಬಣವನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದಾರಂತೆ. ಜೊತೆಗೆ ಆ ಪಕ್ಷಕ್ಕೆ ‘ಶಿವಸೇನೆ-ಬಾಳಾಸಾಹೇಬ್ ಠಾಕ್ರೆ ಬಣ’ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರಂತೆ.
ಶಿಂಧೆ ಬೆಂಬಲಿಗರು ಈ ಹೆಸರಿನ ಬಗ್ಗೆ ಘೋಷಣೆಯನ್ನು ಶೀಘ್ರದಲ್ಲೇ ಮಾಡುವ ಸಾಧ್ಯತೆ ಇದೆ.